ಹೈದರಾಬಾದ್(ತೆಲಂಗಾಣ): ಮದುವೆ ಮಾಡಿಕೊಂಡ ಆರು ತಿಂಗಳಲ್ಲೇ ಕಟ್ಟಿಕೊಂಡ ಹೆಂಡತಿ ಮೇಲೆ ಅನುಮಾನಪಟ್ಟು, ಅವಳನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್ನ ಮೂಸಾಪೇಟೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯವನಾದ ಸಂತೋಷ್, ಬಾಲ್ಯದಿಂದಲೂ ಪೋಷಕರೊಂದಿಗೆ ಹೈದರಾಬಾದ್ನ ಮುಸಾಪೇಟೆಯಲ್ಲಿ ವಾಸವಾಗಿದ್ದನು. ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡ್ತಿದ್ದ ಇವರು, ಕಳೆದ ಮೇ ತಿಂಗಳಲ್ಲಿ ಸ್ಥಳೀಯ ನಿವಾಸಿ ಪುಣ್ಯವತಿ(20) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಇದರ ಬೆನ್ನಲ್ಲೇ ಹೆಂಡತಿ ಜೊತೆ ಬೇರೆ ಮನೆ ಮಾಡಿಕೊಂಡು ವಾಸ ಮಾಡಲು ಶುರು ಮಾಡಿದ್ದರು.
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲ ತಿಂಗಳು ಕಳೆದ ಮೇಲೆ ಹೆಂಡತಿ ಮೇಲೆ ಅನುಮಾನಪಡಲು ಶುರು ಮಾಡಿದ್ದ. ಹೀಗಾಗಿ, ತನ್ನ ಕುಟುಂಬದ ಸದಸ್ಯರು ಸೇರಿದಂತೆ ಯಾರೊಂದಿಗೂ ಫೋನ್ನಲ್ಲಿ ಮಾತನಾಡದಂತೆ ಷರತ್ತು ವಿಧಿಸಿದ್ದ ಕೂಡಾ. ಗಂಡನ ಈ ನಿರ್ಧಾರದಿಂದ ಮಾನಸಿಕವಾಗಿ ನೊಂದಿದ್ದ ಪುಣ್ಯವತಿ ತಮ್ಮ ಚಿಕ್ಕಪ್ಪ, ಚಿಕ್ಕಮ್ಮನ ಬಳಿ ದೂರು ನೀಡಿದ್ದರು. ಈ ವೇಳೆ, ಎರಡು ಕುಟುಂಬದವರು ಮಧ್ಯಪ್ರವೇಶ ಮಾಡಿ, ರಾಜಿ ಮಾಡಿಸಿ, ಸಂತೋಷ್ಗೆ ಬುದ್ಧಿವಾದ ಹೇಳಿದ್ದರು. ಇದಾದ ಬಳಿಕ ಕೆಲ ದಿನಗಳ ಕಾಲ ಚೆನ್ನಾಗಿದ್ದ ಆತ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಜೊತೆಗೆ ಮದ್ಯಪಾನ ಮಾಡಲು ಶುರು ಮಾಡಿ, ಪತ್ನಿ ಜೊತೆ ಜಗಳ ಮಾಡಲು ಆರಂಭಿಸಿದ್ದ.
ಇದನ್ನೂ ಓದಿರಿ:ಮೋದಿ ಸರ್ಕಾರದ ಅವಧಿಯಲ್ಲಿ 4.28 ಕೋಟಿ ಬೋಗಸ್ ಪಡಿತರ ಚೀಟಿ ರದ್ದು
ಹೆಂಡತಿಗೆ ಪ್ರತಿದಿನ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲು ಶುರು ಮಾಡಿರುವ ಸಂತೋಷ್,ನಿನ್ನೆ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತುಂಬಾ ಸಮಯವಾದರೂ ಮನೆಯ ಬೀಗ ಹಾಕಿದ್ದ ಕಾರಣ ಸ್ಥಳೀಯರು ಎರಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದು ನೋಡಿದಾಗ ಪುಣ್ಯವತಿ ಕೊಲೆಯಾಗಿದ್ದಳು. ಘಟನಾ ಸ್ಥಳಕ್ಕೆ ಕುಕ್ಕಟ್ಪಲ್ಲಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ.