ತಿರುವನಂತಪುರ:ಪ್ರಸಿದ್ಧ ಧಾರ್ಮಿಕ ತಾಣ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಜನದಟ್ಟಣೆಯೂ ಉಂಟಾಗಿದೆ. ದೇವರ ದರ್ಶನಕ್ಕೆ 20 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಇದೆ. ನಿರೀಕ್ಷೆಗೂ ಮೀರಿ ಭಕ್ತರು ದೇಗುಲಕ್ಕೆ ಆಗಮಿಸಿದ್ದರೂ ಈ ವರ್ಷ ಆದಾಯದಲ್ಲಿ ಕುಸಿತವಾಗಿದೆ. ದೇಗುಲದ ಆಡಳಿತ ನಡೆಸುವ ಟ್ರವಾಂಕೂರ್ ದೇವಸ್ವಂ ಬೋರ್ಡ್ ಶುಕ್ರವಾರ ಈ ಮಾಹಿತಿ ನೀಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸುಮಾರು 20 ಕೋಟಿ ರೂ ಆದಾಯ ಕಡಿಮೆಯಾಗಿದೆ. ಕಳೆದ 28 ದಿನದಲ್ಲಿ ಅಂದರೆ ನವೆಂಬರ್ 17ರಿಂದ ಇಲ್ಲಿಯವರೆಗೆ ಅಪ್ಪಮ್ ಮತ್ತು ಪಾಯಸಂ ಮಾರಾಟ ಮತ್ತು ದೇವರಿಗೆ ಸಮರ್ಪಣೆಯಿಂದ 134.44 ಕೋಟಿ ರೂ ಆದಾಯ ಬಂದಿದೆ. ಕಳೆದ ವರ್ಷ ಅಂದರೆ 2022ರ 28 ದಿನದಲ್ಲಿ 154 ಕೋಟಿ ರೂ ಆದಾಯ ಬಂದಿತ್ತು.
ನವೆಂಬರ್ 17ರಿಂದ ಇಲ್ಲಿಯವರೆಗೆ ಒಟ್ಟು 28 ದಿನ ಕ್ಷೇತ್ರಕ್ಕೆ 17.52 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಮುಂದಿನ 33 ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶವಿದ್ದು, ಇದಾದ ಬಳಿಕ ಈ ವರ್ಷದ ಮಂಡಲ ಮಕರವಿಲಕ್ಕು ಭಕ್ತರ ಋತುಮಾನ ಕೊನೆಯಾಗಲಿದೆ.