ಅಹಮದಾಬಾದ್:ಗುಜರಾತ್ನ ಅಹಮದಾಬಾದ್ನಲ್ಲಿ ಹಾದು ಹೋಗುವ ಸರ್ಕೇಜ್-ಗಾಂಧಿ ನಗರ ಹೆದ್ದಾರಿಯ ಇಸ್ಕಾನ್ ಫ್ಲೈ ಓವರ್ ಮೇಲೆ ತಡರಾತ್ರಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಡಂಪರ್ ಮತ್ತು ಮಹೀಂದ್ರಾ ಥಾರ್ ಕಾರಿನ ಮಧ್ಯೆ ಡಿಕ್ಕಿಯಾಗಿದ್ದನ್ನು ನೋಡಲು ಫ್ಲೈಓವರ್ ಮೇಲೆ ನಿಂತಿದ್ದ ಜನರಿಗೆ ಅಂದಾಜು 160 ಕಿಮೀ ವೇಗದಲ್ಲಿ ಬಂದ ಜಾಗ್ವಾರ್ ಕಾರು ಗುದ್ದಿದ್ದು, 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಪೊಲೀಸ್, ಗೃಹ ರಕ್ಷಕ ದಳ ಸಿಬ್ಬಂದಿ ಕೂಡ ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲಿಗೆ ಮಹೀಂದ್ರಾ ಕಾರು ಮತ್ತು ಡಂಪರ್ ನಡುವೆ ಸಣ್ಣ ಅಪಘಾತವಾಗಿದೆ. ಸುದ್ದಿ ತಿಳಿದು ಅಲ್ಲಿ ಜನ ಜಮಾಯಿಸಿದ್ದರು. ಇದೇ ವೇಳೆ ಶರವೇಗದಲ್ಲಿ ಬಂದ ಜಾಗ್ವಾರ್ ಕಾರು ಜನರಿಗೆ ಗುದ್ದಿಕೊಂಡು ಹೋಗಿದೆ. ರಭಸಕ್ಕೆ ಜನರು 30 ಅಡಿ ದೂರ ಹಾರಿ ಬಿದ್ದಿದ್ದಾರೆ. ಸ್ಥಳದಲ್ಲೇ 6 ಮಂದಿ ಪ್ರಾಣ ಕಳೆದುಕೊಂಡರು. ಅಪಘಾತ ವೀಕ್ಷಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಕೂಡ ಅಸುನೀಗಿದ್ದಾರೆ.
ಕಾರು ಗುದ್ದಿದ ಏಟಿಗೆ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಸ್ಕಾನ್ ಸೇತುವೆಯ ಮೇಲೆ ಅಂದಾಜು 40 ರಿಂದ 50 ಮಂದಿ ಸೇರಿದ್ದರು. ಅಪಘಾತಕ್ಕೆ ಕಾರಣವಾದ ಜಾಗ್ವಾರ್ ಕಾರು ಚಾಲಕ ಸೇರಿದಂತೆ 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಾಗ್ವಾರ್ ಕಾರಿನಲ್ಲಿ ಬಾಲಕಿ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.