ಹೈದರಾಬಾದ್:ಕುಟುಂಬಸ್ಥರ ವಿರೋಧದ ಮಧ್ಯೆಪ್ರೀತಿಸಿ ಮದುವೆಯಾಗಿದ್ದಕ್ಕೆ ವ್ಯಕ್ತಿಯನ್ನು, ಆತನ ಪತ್ನಿಯ ಮುಂದೆಯೇ ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್ ಮೃತ ವ್ಯಕ್ತಿ. ನಾಗರಾಜ ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇದು ಉಭಯ ಕುಟುಂಬಗಳ ವಿರೋಧಕ್ಕೆ ಕಾರಣವಾಗಿತ್ತು.
ಅಲ್ಲದೇ, ಕುಟುಂಬದವರ ಅನುಮತಿ ಇಲ್ಲದೇ ಯುವತಿಯನ್ನು ಕರೆದುಕೊಂಡು ಹೋಗಿ ಗೌಪ್ಯವಾಗಿ ಮದುವೆಯಾಗಿದ್ದ ನಾಗರಾಜ್, ಹೈದರಾಬಾದ್ನಲ್ಲಿ ಪ್ರೀತಿಸಿ ಮದುವೆಯಾದ ಹೆಂಡತಿಯ ಜೊತೆ ಜೀವನ ನಡೆಸುತ್ತಿದ್ದರು. ಇದು ಯುವತಿಯ ಮನೆಯವರನ್ನು ಕೆರಳಿಸಿದೆ. ನಿನ್ನೆ ರಾತ್ರಿ (ಬುಧವಾರ) ಯುವತಿಯ ಅಣ್ಣ ಮತ್ತು ಆತನ ಸ್ನೇಹಿತ ಮಾರಕಾಯುಧಗಳಿಂದ ನಾಗರಾಜ್ನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಕೊಂದು ಹಾಕಿದ್ದಾರೆ.
ವಿವರ:ನಾಗರಾಜ ಮತ್ತು ಅಶ್ರೀನ್ ಸುಲ್ತಾನಾ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಅಶ್ರಿನ್ ಕುಟುಂಬಸ್ಥರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಅಶ್ರೀನ್ ಅವರನ್ನು ಮದುವೆಯಾಗಲು ನಿರ್ಧರಿಸಿದ ನಾಗರಾಜ್, ಕೆಲ ತಿಂಗಳ ಹಿಂದೆ ಹೈದರಾಬಾದ್‌ನ ಕಾರು ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದರು. ಬಳಿಕ ಇಬ್ಬರೂ ಜನವರಿ 31 ರಂದು ಗೌಪ್ಯವಾಗಿ ಲಾಲ್ ದರ್ವಾಜಾದ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದಾರೆ. ಬಳಿಕ ಹೈದರಾಬಾದ್ನಲ್ಲಿ ರಹಸ್ಯವಾಗಿ ಜೀವನ ಸಾಗಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರನ್ನು ಕೆರಳಿಸಿತ್ತು.