ನವದೆಹಲಿ:ಕಾಂಗ್ರೆಸ್ ನಾಯಕಿಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ (ಆರ್‌ಜಿಸಿಟಿ) ಎಂಬ ಎರಡು ಎನ್‌ಜಿಒಗಳ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಗಳನ್ನು ಕೇಂದ್ರ ಗೃಹ ಸಚಿವಾಲಯ (ಎಂಹೆಚ್‌ಎ) ರದ್ದುಗೊಳಿಸಿದೆ.
2020ರಲ್ಲಿ ಗೃಹ ಸಚಿವಾಲಯದ 'ಅಂತರ-ಸಚಿವಾಲಯ ಸಮಿತಿ ನಡೆಸಿದ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ತನಿಖಾಧಿಕಾರಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ದಾಖಲೆಗಳ ದುರ್ಬಳಕೆ, ಹಣದ ದುರುಪಯೋಗ ಮತ್ತು ಚೀನಾ ಸೇರಿದಂತೆ ವಿದೇಶಗಳಿಂದ ಹಣವನ್ನು ಸ್ವೀಕರಿಸುವಾಗ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್‌ಜಿಎಫ್‌ನ ಟ್ರಸ್ಟಿಗಳು:ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್‌ಜಿಎಫ್‌ನ ಅಧ್ಯಕ್ಷರಾಗಿದ್ದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಸುಮನ್ ದುಬೆ ಮತ್ತು ಅಶೋಕ್ ಗಂಗೂಲಿ ಟ್ರಸ್ಟಿಗಳಾಗಿದ್ದಾರೆ.
ಆರ್‌ಜಿಎಫ್ 1991ರಲ್ಲಿ ಸ್ಥಾಪನೆಯಾಗಿತ್ತು. 1991 ರಿಂದ 2009 ರವರೆಗೆ ಆರೋಗ್ಯ, ವಿಜ್ಞಾನ–ತಂತ್ರಜ್ಞಾನ, ಮಹಿಳೆಯರು–ಮಕ್ಕಳು, ಅಂಗವಿಕಲರಿಗೆ ಬೆಂಬಲ ಸೇರಿದಂತೆ ಹಲವಾರು ನಿರ್ಣಾಯಕ ಸಂಗತಿಗಳಲ್ಲಿ ಆರ್‌ಜಿಎಫ್ ಕೆಲಸ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲೂ ಆರ್‌ಜಿಎಫ್ ಕೆಲಸ ಮಾಡಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.