ಹೈದರಾಬಾದ್:ತಾಯಿ ಇಲ್ಲದ, ಅಜ್ಜಿಯ ಪಾಲನೆಯಲ್ಲಿರುವ 10 ತಿಂಗಳ ಕೂಸನ್ನು ತಂದೆಗೆ ಹಸ್ತಾಂತರಿಸಲು ಆಂಧ್ರ ಪ್ರದೇಶ ಹೈಕೋರ್ಟ್ ನಿರಾಕರಿಸಿದೆ. ಅಜ್ಜ-ಅಜ್ಜಿಯು ಮಗುವನ್ನು ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಸಾಬೀತು ಮಾಡಲು ತಂದೆ ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಜನಿಸಿದಾಗಿನಿಂದ ಮಗುವನ್ನು ಅಜ್ಜ-ಅಜ್ಜಿ ಚೆನ್ನಾಗಿ ನೋಡಿಕೊಂಡಿದ್ದಾರೆ. ದುರದೃಷ್ಟವಶಾತ್ ಮಗುವಿನ ತಾಯಿ ತೀರಿಕೊಂಡಿದ್ದಾರೆ. ನೈಸರ್ಗಿಕ ಪೋಷಕರು ಯಾರೆಂಬುದನ್ನು ನಿರ್ಧರಿಸುವ ಮೊದಲು, ನ್ಯಾಯಾಲಯಗಳು ಮಕ್ಕಳ ಕಲ್ಯಾಣವನ್ನು ಪರಿಗಣಿಸುವುದು ಅಗತ್ಯ ಎಂದು ಕೋರ್ಟ್ ಉಲ್ಲೇಖಿಸಿದೆ.
ಸಿವಿಲ್ಕೋರ್ಟ್ ಮೊರೆ ಹೋಗಬಹುದು:ಮಗುವನ್ನು ತನಗೆ ಹಸ್ತಾಂತರಿಸುವಂತೆ ತಂದೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದು. ಅಲ್ಲಿಯವರೆಗೆ ಅಜ್ಜಿ, ತಾತನ ಬಳಿ ಇರುವ ಮಗುವನ್ನು ನೋಡಲು ತಂದೆ ಪ್ರತಿ ಭಾನುವಾರ ಹೋಗಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ಯು.ದುರ್ಗಾ ಪ್ರಸಾದ ರಾವ್ ಮತ್ತು ನ್ಯಾಯಮೂರ್ತಿ ಬಿ.ವಿ.ಎಲ್.ಎಲ್ ಚಕ್ರವರ್ತಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಬಾಪಟ್ಲಾ ಜಿಲ್ಲೆಯ ಗೋಪಿ ಎಂಬ ವ್ಯಕ್ತಿ ತನ್ನ ಅತ್ತೆಯ ಅಕ್ರಮ ಬಂಧನದಲ್ಲಿರುವ ತನ್ನ 10 ತಿಂಗಳ ಮಗಳನ್ನು ಪೊಲೀಸರಿಗೆ ಒಪ್ಪಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಿದೆ.
ಏಪ್ರಿಲ್ನಲ್ಲಿ ನಿಧನರಾಗಿದ್ದ ತಾಯಿ:ಅಕ್ಟೋಬರ್ 15, 2021 ರಂದು ಅರ್ಜಿದಾರನ ಪತ್ನಿ ಕೆ. ಮೌನಿಕಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದ ಕಾರಣ ಏಪ್ರಿಲ್ 03, 2022 ರಂದು ಅವರು ನಿಧನರಾಗಿದ್ದರು. ಈ ಮಧ್ಯೆ ತನ್ನ ಅತ್ತೆ-ಮಾವ ಮಗುವನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಗೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.