ಬೆಂಗಳೂರು :ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಸೂರ್ಯನ ಮೇಲ್ಮೈ ಅಧ್ಯಯನ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ್ದ ಆದಿತ್ಯ ಎಲ್-1 ನೌಕೆಯು ಇಂದು ತನ್ನ ಗಮ್ಯಸ್ಥಾನ ತಲುಪಿದೆ. ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿರುವ ಲ್ಯಾಂಗ್ರೇಜಿಯನ್ ಪಾಯಿಂಟ್ನಲ್ಲಿ ಇಸ್ರೋ ತನ್ನ ನೌಕೆಯನ್ನು ಸ್ಥಿರಗೊಳಿಸಿದೆ.
ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ-ಭೂಮಿಯ ನಡುವಿನ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗಿದೆ. L1 ಬಿಂದುವಿನ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಉಪಗ್ರಹವು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಜೊತೆಗೆ ಸೌರ ಚಟುವಟಿಕೆಗಳು ಮತ್ತು ಅಲ್ಲಿನ ಹವಾಮಾನದ ಮೇಲೂ ನಿಗಾ ವಹಿಸಲಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್ 1 ತನ್ನ ನಿಗದಿತ ಕಕ್ಷೆ ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟಕರ ಬಾಹ್ಯಾಕಾಶ ಕಾರ್ಯಾಚರಣೆಯಾಗಿದ್ದು, ಇದರ ಸಾಧನೆ ನಮ್ಮ ವಿಜ್ಞಾನಿಗಳ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸಲು ದೇಶದ ಜನತೆಯೊಂದಿಗೆ ನಾನು ಕೂಡ ಭಾಗಿಯಾಗುತ್ತೇನೆ. ಮನುಕುಲದ ಪ್ರಯೋಜನಕ್ಕಾಗಿ ನಾವು ವಿಜ್ಞಾನದಲ್ಲಿ ಹೊಸ ಮೈಲಿಗಲ್ಲುಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.