ಹೈದರಾಬಾದ್ (ತೆಲಂಗಾಣ):ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಯುವಕನೊಬ್ಬ ಹಠಾತ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಖಮ್ಮಂನಲ್ಲಿ ನಡೆದಿದೆ. ಖಮ್ಮಂ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಧಾ ಕಿಶೋರ್ ಅವರ ಪುತ್ರ ಶ್ರೀಧರ್ (31) ಮೃತರು.
ಭಾನುವಾರವಷ್ಟೇ ಪಟ್ಟಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಜಿಮ್‌ನಿಂದ ಮನೆಗೆ ಹಿಂದಿರುಗಿದ ಶ್ರೀಧರ್, ತನಗೇಕೋ ಆಯಾಸವಾಗುತ್ತದೆ, ಅಲ್ಲದೇ ಎದೆಯಲ್ಲಿ ತೀವ್ರತರಹದ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಕುಟುಂಬಸ್ಥರ ಮುಂದೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದ. ಮಗನ ಕುಂದಿದ ನಿರುತ್ಸಾಹ ಮತ್ತು ಅಸ್ವಸ್ಥ ರೀತಿಯಲ್ಲಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದಕೊಂಡು ಬಂದಿದ್ದರು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಶ್ರೀಧರ್ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರಿಗೆ ಆಕಾಶವೇ ಕಳಚಿ ತಲೆ ಮೇಲೆ ಕಳಚಿ ಬಿದ್ದಷ್ಟು ಆಘಾತವಾಗಿದೆ.
ಮೃತ ಶ್ರೀಧರ್ ಈ ಹಿಂದೆ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದರು. ಆರೈಕೆಯಾದ ಬಳಿಕ ಇತ್ತೀಚೆಗಷ್ಟೇ ಜಿಮ್‌ಗೆ ತೆರಳುತ್ತಿದ್ದರು. ಭಾನುವಾರ ಖಮ್ಮಂನಲ್ಲಿ ನಾಗರಾಜು (33) ಎಂಬ ವ್ಯಕ್ತಿ ಕೂಡ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇತ್ತೀಚಿಗೆ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಎರಡು ದಿನಗಳಲ್ಲಿ ಇಬ್ಬರು ಯುವಕರು ಹಠಾತ್ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಯುವಕರನ್ನು ಚಿಂತೆಗೀಡು ಮಾಡಿದೆ.