ನವದೆಹಲಿ:ದೇಶದಲ್ಲಿರುವ ರೆಡ್‌ಕ್ರಾಸ್ ಸಂಸ್ಥೆಯ ಶಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಹಣಕಾಸು ಅಕ್ರಮಗಳ ದೂರು ಬಂದಿದ್ದು, ಪ್ರಾದೇಶಿಕ ಶಾಖೆಗಳಲ್ಲಿ ಸಿಬಿಐ ತನಿಖೆ ಕೈಗೊಂಡಿದೆ. ಈ ಕುರಿತು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಸಚಿವಾಲಯದ ಅಧಿಕಾರಿಯೊಬ್ಬರು ಹೇಳುವಂತೆ, ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ಸೇರಿದಂತೆ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತದಲ್ಲಿರುವ ರೆಡ್‌ಕ್ರಾಸ್ ಸೊಸೈಟಿಯ ಪ್ರಾದೇಶಿಕ ಶಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಶಾಖೆಯ ಕಾರ್ಯಚಟುವಟಿಕೆಯ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಗಳನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿತ್ತು ಎಂದು ತಮಿಳುನಾಡಿನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆಗಿನ ರಾಜ್ಯಪಾಲರು ಜುಲೈ 2020 ರಲ್ಲಿ ದೆಹಲಿಯಲ್ಲಿರುವ ರೆಡ್ ಕ್ರಾಸ್ ಸೊಸೈಟಿಯ ರಾಷ್ಟ್ರೀಯ ಪ್ರಧಾನ ಕಚೇರಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಶಿಫಾರಸು ಮಾಡಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ನಿರ್ದೇಶನ ನೀಡಿದ್ದರು. ಹೀಗಾಗಿ, ಸಿಬಿಐ ತನಿಖೆಗೆ ಸರ್ಕಾರ ಆದೇಶಿಸಿತ್ತು.
ತಮಿಳುನಾಡು ಶಾಖೆಯ ಆರೋಪಿ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳು ಸಿಬಿಐ ತನಿಖೆಗೆ ಮದ್ರಾಸ್ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಜೂನ್ 2022ರಲ್ಲಿ ಕೊನೆಗೊಂಡಿತ್ತು. ಸದ್ಯ ತಮಿಳುನಾಡಿನ ಸ್ಪೀಕರ್ ರಾಜೀನಾಮೆ ನೀಡಿದ್ದು, ಪ್ರಕರಣ ಸಿಬಿಐ ವಶದಲ್ಲಿದೆ. ರಾಜ್ಯಪಾಲರು ರಾಜ್ಯ ನಿರ್ವಹಣಾ ಸಮಿತಿಯನ್ನು ವಿಸರ್ಜಿಸಿದ್ದಾರೆ. ಅದರ ಸ್ಥಳದಲ್ಲಿ ತಾತ್ಕಾಲಿಕ ಸಮಿತಿ ರಚಿಸಿದ್ದಾರೆ.