ಪಂಚಕುಲ (ಹರಿಯಾಣ): ಹರಿಯಾಣದಲ್ಲಿ ಹಳೆ ಪಿಂಚಣಿ ಯೋಜನೆ (ಒಪಿಎಸ್)ಯನ್ನು ಮರು ಜಾರಿ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಭಾನುವಾರ ಪಂಚಕುಲದಲ್ಲಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾನಿತರ ನೌಕರರ ಗುಂಪು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.
ಹರಿಯಾಣದ ಪಿಂಚಣಿ ಬಹಲಿ ಸಂಘರ್ಷ ಸಮಿತಿ (ಪಿಬಿಬಿಎಸ್) ನೇತೃತ್ವದಲ್ಲಿ ಸಾವಿರಾರು ನೌಕರರು, ಹೊಸ ಪಿಂಚಣಿ ಯೋಜನೆ (ಒಪಿಎಸ್) ರದ್ದು ಮಾಡಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕೆಂದು ಸಿಎಂ ಖಟ್ಟರ್ ಸಮೀಪ ಇಂದು ಹೋರಾಟ ಆರಂಭಿಸಿದ್ದರು. ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಅಲ್ಲದೇ, ಸಿಎಂ ನಿವಾಸದ ಬಳಿ ಬ್ಯಾರಿಕೇಡ್ಗಳನ್ನು ಹಾಕಿ ಬಂದೋಬಸ್ತ್ ಕೈಗೊಂಡಿದ್ದರು. ಇದರ ನಡುವೆಯೂ ಪ್ರತಿಭಟನೆ ಮುಂದುದುವರೆದಾಗ ಪೊಲೀಸರು ನೌಕರರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದರು.
ಇದನ್ನೂ ಓದಿ:ಬಿಜೆಪಿಗೆ ಬಿಸಿತುಪ್ಪವಾದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, OPS ಪಟ್ಟು; ಬೊಮ್ಮಾಯಿ ಸರ್ಕಾರದ ಕಾರ್ಯತಂತ್ರ ಏನು?
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಿಬಿಬಿಎಸ್ ವಕ್ತಾರ ಪ್ರವೀಣ್ ದೇಶವಾಲ್, ಹಳೆ ಪಿಂಚಣಿ ಯೋಜನೆ ಮರು ಮಾಡಬೇಕೆಂಬುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆದರೆ, ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ರಾಜ್ಯ ಸರ್ಕಾರ ನೌಕರರ ಮಾತನ್ನು ಕೇಳುತ್ತಿಲ್ಲ. ಇಂದು ಸುಮಾರು 70,000 ನೌಕರರು ಸಿಎಂ ನಿವಾಸದ ಮುಂದೆ ಜಮಾಯಿಸಿ ಪ್ರತಿಭಟನೆಗೆ ಇಳಿದಿದ್ದೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ನೆರೆಯ ರಾಜಸ್ಥಾನದಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಹಳೆ ಪಿಂಚಣಿ ಯೋಜನೆಯನ್ನು ಮರು ಅನುಷ್ಠಾನ ಮಾಡಲಾಗಿದೆ. ಆದರೆ, ಈ ಕುರಿತು ಬಿಜೆಪಿ ಸರ್ಕಾರ ನೌಕರರೊಂದಿಗೆ ಸಮಾಲೋಚನೆ ನಡೆಸುತ್ತಿಲ್ಲ. ನಾವು ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಪ್ರವೀಣ್ ದೇಶವಾಲ್ ಹೇಳಿದ್ದಾರೆ.
ನೌಕರರ ವಿರುದ್ಧ ಬಲ ಪ್ರಯೋಗಕ್ಕೆ ಕಾಂಗ್ರೆಸ್ ಖಂಡನೆ:ತಮ್ಮ ಬೇಡಿಕೆ ಈಡೇರಿಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಸರ್ಕಾರಿ ನೌಕರರ ಮೇಲೆ ಸರ್ಕಾರದ ಬಲ ಪ್ರಯೋಗವನ್ನು ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಖಂಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನೌಕರರ ಮೇಲೆ ಲಾಠಿ ಪ್ರಹಾರ ಮತ್ತು ಅಶ್ರುವಾಯು ಬಳಕೆ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಮಾತುಕತೆಯ ಮೂಲಕ ನಡೆಸಬೇಕು. ಆದರೆ, ಹರಿಯಾಣದ ಬಿಜೆಪಿ-ಜೆಜೆಪಿ ಮೈತ್ರಿಕೂಟವು ಲಾಠಿ ಮತ್ತು ಬುಲೆಟ್ಗಳ ಮೂಲಕ ಸರ್ಕಾರವನ್ನು ನಡೆಸಲು ಬಯಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಹಳೆ ಪಿಂಚಣಿ ಯೋಜನೆ ಜಾರಿಗೆ ಪಂಜಾಬ್ ಸಚಿವ ಸಂಪುಟ ಅನುಮೋದನೆ
ಅಲ್ಲದೇ, ಈಗಿನ ಬಿಜೆಪಿ ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಪಿಎಸ್ ಜಾರಿಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕಾಂಗ್ರೆಸ್ ಅಡಳಿತದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ಹಳೆ ಪಿಂಚಣಿ ಯೋಜನೆ ಜಾರಿಯಾಗಿದೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಂತೆ ಹರಿಯಾಣದ ನೌಕರರು ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಿಂಚಣಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೂಡಾ ತಿಳಿಸಿದ್ದಾರೆ.
ಇದನ್ನೂ ಓದಿ:ಹಳೆಯ ಪಿಂಚಣಿ ಯೋಜನೆ ಜಾರಿಗೆ ಹಿಮಾಚಲ ಸರ್ಕಾರ ಒಪ್ಪಿಗೆ... ಮೊದಲ ಚುನಾವಣಾ ಭರವಸೆ ಈಡೇರಿಕೆ