ಫರಿದಾಬಾದ್(ಹರಿಯಾಣ): ಹಾರ್ಲೆ ಡೇವಿಡ್ಸನ್ ಬೈಕ್ ಎಂದರೆ ಬೈಕ್ ಪ್ರೇಮಿಗಳಿಗಂತೂ ಕ್ರೇಜ್. ಈ ಬೈಕ್ ರೈಡಿಂಗ್ ಎಂದರೆ ಯುವಕರಿಗೆ ಪ್ಯಾಷನ್ ಇರುತ್ತದೆ. ಈ ಬೆಲೆ ಬಾಳುವ ಬೈಕ್ ಖರೀದಿಸಿ, ಓಡಿಸಬೇಕು ಎಂಬುದು ಹಲವರ ಕನಸಾಗಿಯೂ ಇರುತ್ತದೆ. ಹಾಗಿರುವಾಗ ಇಲ್ಲೊಬ್ಬ ಹರಿಯಾಣದ ಫರಿದಾಬಾದ್ನ ಅಮಿತ್ ಭದನಾ ಎನ್ನುವ ವ್ಯಕ್ತಿ ಹಾರ್ಲೆ ಡೇವಿಡ್ಸನ್ ಬೈಕ್ ರೈಡಿಂಗ್ ಮಾತ್ರವಲ್ಲ ಬೈಕ್‌ನಲ್ಲಿ ಹಾಲು ಮಾರುವ ಮೂಲಕ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ.
ಫರಿದಾಬಾದ್ನ ಅಮಿತ್ ಭದನಾ ಅವರು ಹಾರ್ಲೆ ಡೇವಿಡ್ಸನ್ ಬೈಕ್ ನಲ್ಲಿ ಹಾಲಿನ ಕ್ಯಾನ್‌ಗಳನ್ನು ಇರಿಸಿಕೊಂಡು ಮನೆ ಮನೆಗ ಹಾಲು ಹಾಕುತ್ತಿದ್ದಾರೆ. ಇವರು ಹಾರ್ಲೆ ಡೇವಿಡ್ಸನ್ ಬೈಕ್‌ನಲ್ಲಿ ತಮ್ಮ ಬ್ಯುಸಿನೆಸ್ ಕುದುರಿಸುತ್ತಿದ್ದಾರೆ. ಫರಿದಾಬಾದ್ನ ಬೀದಿ ಬೀದಿಗಳಲ್ಲಿ ತಮ್ಮ ಗಿರಾಕಿಗಳ ಮನೆ ಬಾಗಿಲಿಗೆ ಹಾರ್ಲೆ ಡೇವಿಡ್ಸನ್ ಬೈಕ್‌ನಲ್ಲಿ ಹಾಲು ಪೂರೈಸುತ್ತಿದ್ದಾರೆ. ಹೀಗೆ ಬೈಕ್‌ನಲ್ಲಿ ಹಾಲು ಹಾಕುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಬಾಯಲ್ಲೂ ಇವರ ಬಗ್ಗೆಯೇ ಟಾಕ್.
ಇಡೀ ಪಟ್ಟಣವೇ ಅಮಿತ್ ಅವರ ಬಗ್ಗೆಯೇ ಮಾತನಾಡುತ್ತಿದ್ದು, ಎಲ್ಲರೂ ಇವರನ್ನು ಸಾಧಕ ಉದ್ಯಮಿ ಎಂದು ಕರೆಯುತ್ತಿದ್ದಾರೆ. ಯುವಕರು, ಇವರನ್ನು ಯೂತ್ ಐಕಾನ್ ಆಗಿ ನೋಡುತ್ತಿದ್ದಾರೆ. ಇವರ ಬ್ಯುಸಿನೆಸ್ ಸಾಧನೆ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಲು ದೂರದ ಊರುಗಳಿಂದ ಜನ ಬರುತ್ತಾರೆ. ಇವರಂತೆಯೇ ಉದ್ಯಮ ಕ್ಷೇತ್ರದಲ್ಲಿ ಸಾಧಿಸಲು ಅದೆಷ್ಟೋ ಯುವಕರು ಇವರನ್ನು ಭೇಟಿಯಾಗುತ್ತಿದ್ದಾರೆ.
ಇಂದು ಅಮಿತ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಜನಪ್ರಿಯರಾಗಿದ್ದಾರೆ. ಅವರಿಗೆ ನಲವತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಫಿಲ್ಮಿ ಶೈಲಿಯ ಆಲ್ಬಂಗಳನ್ನು ತಯಾರಿಸುವ ನಿರ್ಮಾಪಕರು ಮತ್ತು ಕ್ಯಾಂಡಿಡ್ ಫೋಟೋಗ್ರಾಫರ್‌ಗಳು ಅಮಿತ್ ಅವರ ಹಾರ್ಲೆಯನ್ನು ಬಳಸಿಕೊಂಡು ವಿಡಿಯೋ ನಿರ್ಮಾಣಕ್ಕಾಗಿ ಕೇಳುತ್ತಿದ್ದಾರೆ.
ಅಮಿತ್ ಭದನಾ ಅವರು ಹಾಲು ಉದ್ಯಮ ಶುರು ಮಾಡುವ ಮೊದಲು ಬ್ಯಾಂಕ್ ಉದ್ಯೋಗಿಯಾಗಿದ್ದರು. ಹಾಲಿನ ಉದ್ಯಮ ಶುರು ಮಾಡುವ ಸಲುವಾಗಿ ಉತ್ತಮ ಸಂಬಳ ತರುತ್ತಿದ್ದ ಬ್ಯಾಂಕ್ ಉದ್ಯೋಗವನ್ನು ಅವರು ತೊರೆದರು. ಹಾರ್ಲೆ ಡೇವಿಡ್ಸನ್ ಬೈಕ್ ಮೇಲಿದ್ದ ಪ್ರೀತಿ ಹಾಗೂ ಇವರ ಒಬ್ಬ ವಾಣಿಜ್ಯೋದ್ಯಮಿ ಆಗುವ ಕನಸು ಇವರ ಕುಟುಂಬದವರಿಗೆ ಇಷ್ಟವಿರಲಿಲ್ಲ. ಪ್ರಾರಂಭದಲ್ಲಿ ನಾನು ಡೈರಿ ವ್ಯವಹಾರದಲ್ಲಿ ತೊಡಗುವುದನ್ನು ವಿರೋಧಿಸಿದ್ದ ಕುಟುಂಬದ ಸದಸ್ಯರ ಮನಸ್ಸನ್ನು ಕ್ರಮೇಣ ನಾನೇ ಪರಿವರ್ತಿಸಿದೆ. ನಂತರದಲ್ಲಿ ಅವರೇ ನನ್ನ ಜೊತೆ ಬಂದು ನನ್ನ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತರು ಎನ್ನುತ್ತಾರೆ ಡೈರಿ ಉದ್ಯಮಿ ಅಮಿತ್ ಭದನಾ.