ಹರಿದ್ವಾರ(ಉತ್ತರಾಖಂಡ):8 ತಿಂಗಳ ಮಗುವನ್ನು ಅಪಹರಿಸಿ ಉದ್ಯಮಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ 7 ಮಂದಿಯನ್ನು ಪತ್ರಕರ್ತನ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ. ಕಿಡ್ನ್ಯಾಪ್ ಆದ ಮಗು ಮತ್ತೆ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದೆ. ಈ ಪ್ರಕರಣ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಪ್ರಕರಣವೇನು?:ಪುತ್ರ ಸಂತಾನವಿಲ್ಲದ ಉದ್ಯಮಿಯೊಬ್ಬರು ಅಂಗನವಾಡಿ ಕಾರ್ಯಕರ್ತೆಗೆ ಮಗು ಕೊಡಿಸಲು ಕೇಳಿದ್ದರು. ಅದಕ್ಕಾಗಿ ಸಂಚು ರೂಪಿಸಿದ ಆ ಮಹಿಳೆ, ತನ್ನ ನೆರೆಮನೆಯ ಕುಟುಂಬದ ಮಗುವನ್ನೇ ಅಪಹರಿಸಲು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಆಶಾ ಎಂಬ ಇನ್ನೊಬ್ಬ ಮಹಿಳೆಯ ಸಹಾಯ ಕೋರಿದ್ದಾರೆ.
ಮೊದಲೇ ನಿರ್ಧರಿಸಿದಂತೆ ನೆರೆಮನೆಯ 8 ತಿಂಗಳ ಮಗುವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಹೆತ್ತವರ ಕಣ್ತಪ್ಪಿಸಿ ಅಪಹರಿಸಿದ್ದಾರೆ. ಬಳಿಕ ಮಗು ಸಮೇತ ಉದ್ಯಮಿಯ ಮನೆಗೆ ಹೊರಟಿದ್ದರು. ಈ ವಿಷಯ ತಿಳಿದ ಪತ್ರಕರ್ತರೊಬ್ಬರು ಮಗುವನ್ನು ತಾನು ಖರೀದಿಸುವುದಾಗಿ ಹೇಳಿದ್ದಾರೆ. ಉದ್ಯಮಿ ನೀಡುವ ಹಣಕ್ಕಿಂತಲೂ ದುಪ್ಪಟ್ಟು ನೀಡುವುದಾಗಿ ಆಸೆ ತೋರಿಸಿದ್ದಾರೆ.