ಮುಂಬೈ: ಕೋವಿಡ್-19 ಬಿಕ್ಕಟ್ಟಿನ ಕಾರಣ ಎರಡು ವರ್ಷಗಳ ಕಾಲ ನಿಷೇಧಿಸಲಾಗಿದ್ದ ಹಜ್ ಯಾತ್ರೆಗೆ ಈ ವರ್ಷ ಅವಕಾಶ ದೊರೆಯಲಿದೆ.
ಭಾರತ ಸರ್ಕಾರವು ಮುಸ್ಲಿಮರ ಪ್ರಮುಖ ತೀರ್ಥಯಾತ್ರೆಗಾಗಿ 2022ರ ವೇಳಾಪಟ್ಟಿಯನ್ನು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ ಮತ್ತು 'ಸ್ವದೇಶಿ' ಸ್ಪರ್ಶದೊಂದಿಗೆ ಘೋಷಿಸಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಪುರುಷ ಸಹ ಪ್ರಯಾಣಿಕರಿಲ್ಲದ ಮಹಿಳೆಯರು ಸೇರಿದಂತೆ ಕೊರೊನಾ ಎರಡೂ ಡೋಸ್ ಲಸಿಕರ ಪಡೆದವರು ಮತ್ತು ಮುಂದಿನ ವರ್ಷ ಹಜ್‌ಗೆ ಮುಂದುವರಿಯಲು ಬಯಸುವ ಎಲ್ಲಾ ಮುಸ್ಲಿಮರು ಆನ್‌ಲೈನ್‌ನಲ್ಲಿ ಅಥವಾ ನವೀಕರಿಸಿದ ಹಜ್ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 2022 ಜನವರಿ 31 ಕೊನೆಯ ದಿನಾಂಕವಾಗಿದೆ. ಗಡುವಿನ ಮೊದಲು ಅರ್ಜಿ ಸಲ್ಲಿಸಬೇಕು ಎಂದು ಸಚಿವರು ಹೇಳಿದ್ದಾರೆ.
'ವೋಕಲ್ ಫಾರ್ ಲೋಕಲ್'ಗೆ ಒತ್ತು ನೀಡುವುದರೊಂದಿಗೆ ಹಜ್- 2022 ಯಾತ್ರಿಕರು ಭಾರತದಲ್ಲಿ ಖರೀದಿಸಿದ ಸ್ಥಳೀಯ ಉತ್ಪನ್ನಗಳೊಂದಿಗೆ ಹಜ್ ಯಾತ್ರೆ ಹೋಗುತ್ತಾರೆ. ಹಜ್ ಯಾತ್ರಿಕರು ಇದುವರೆಗೆ ಸೌದಿ ಅರೇಬಿಯಾದಲ್ಲಿ ಬೆಡ್ ಶೀಟ್‌ಗಳು, ದಿಂಬುಗಳು, ಟವೆಲ್‌ಗಳು, ಛತ್ರಿಗಳು ಮತ್ತು ಇತರ ವಸ್ತುಗಳನ್ನು ವಿದೇಶಿ ಕರೆನ್ಸಿಯಲ್ಲಿ ಖರೀದಿಸುತ್ತಿದ್ದರು. ಆದರೆ ಈ ಬಾರಿ ಹೆಚ್ಚಿನ ಸರಕುಗಳನ್ನು ಭಾರತೀಯ ಕರೆನ್ಸಿಯಲ್ಲಿ ಭಾರತದಲ್ಲಿ ಖರೀದಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ಎಲ್ಲಾ ವಸ್ತುಗಳನ್ನು ಹಜ್ ಯಾತ್ರಾರ್ಥಿಗಳಿಗೆ ಭಾರತದಲ್ಲಿನ ಅವರ ಆಯಾ ಎಂಬಾರ್ಕೇಶನ್ ಪಾಯಿಂಟ್‌ಗಳಲ್ಲಿ ನೀಡಲಾಗುವುದು.