ಬನಸ್ಕಾಂಥ್ (ಗುಜರಾತ್):ಗುಜರಾತ್ನಲ್ಲಿ ಬಲಿಷ್ಠವಾಗಿರುವ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ಠಾಕೂರ್ ಸಮಾಜ ತನ್ನ ಸಮುದಾಯದ ಜನರಿಗೆ ಹೊಸ ಸಂಪ್ರದಾಯ ಮತ್ತು ನಿಯಮಗಳನ್ನು ರೂಪಿಸಿದೆ. ಸಾಮೂಹಿಕ ವಿವಾಹ ಆಯೋಜನೆ, ಅವಿವಾಹಿತ ಹೆಣ್ಣು ಮಕ್ಕಳಿಗೆ ಮೊಬೈಲ್ ನಿಷೇಧ ಸೇರಿದಂತೆ ಕೆಲ ಕಟ್ಟುಪಾಡುಗಳನ್ನು ವಿಧಿಸಿದೆ. ಇದನ್ನು ಸಮುದಾಯದ ಎಲ್ಲ ಜನರು ಪಾಲಿಸಬೇಕು ಎಂದು ಕರೆ ನೀಡಿದೆ.
ಬನಸ್ಕಾಂಥ್ ಜಿಲ್ಲೆಯ ಭಾಭಾರ್ ತಾಲೂಕಿನ ಲುನ್ಸೆಲಾದಲ್ಲಿ ಸಂತಶ್ರೀ ಸದಾರಾಮ್ ಬಾಪಾ ಅವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಠಾಕೂರ್ ಸಮಾಜದ ಸದಸ್ಯರು ತಮ್ಮ ಸಮುದಾಯದ ಸಂಪ್ರದಾಯಗಳಿಗೆ ಸುಧಾರಣೆಗಳನ್ನು ತರಲು 11 ಹೊಸ ನಿಯಮಗಳನ್ನು ಪರಿಚಯಿಸಿದರು. ಇವುಗಳ ಪಾಲನೆಯಿಂದ ಸಮಾಜದಲ್ಲಿ ಒಗ್ಗಟ್ಟು ಮತ್ತು ಪಾವಿತ್ರ್ಯತೆ ಉಳಿಸಿಕೊಳ್ಳಲು ಸಾಧ್ಯ ಎಂಬುದು ಸಮಾಜದ ನಿರೀಕ್ಷೆಯಾಗಿದೆ.
ಹೊಸ ನಿಯಮಗಳೇನು?:ಮದುವೆಗಳಲ್ಲಿ ಡಿಜೆಗಳ ಮೇಲೆ ಸಂಪೂರ್ಣ ನಿಷೇಧ, ವಿವಾಹದ ವೇಳೆ ಉಡುಗೊರೆಗಳ ಬದಲಿಗೆ ನಗದು ಹಣವನ್ನೇ ನೀಡುವುದು, ವರ ಮತ್ತು ವಧುವಿಗೆ ದೈನಂದಿನ ಜೀವನಕ್ಕೆ ಉಪಯುಕ್ತವಾದ ಉಡುಗೊರೆಗಳನ್ನು ಮಾತ್ರ ನೀಡಬೇಕು. ನಿಶ್ಚಿತಾರ್ಥ ಮತ್ತು ಸಣ್ಣ ವಿವಾಹಗಳಲ್ಲಿ ಕೇವಲ 11 ಜನರು ಮಾತ್ರ ಹಾಜರಿದ್ದರೆ ಸಾಕು. ದೊಡ್ಡ ಮದುವೆ ಸಮಾರಂಭದಲ್ಲಿ ಕೇವಲ 51 ಜನರಿಗೆ ಅವಕಾಶ ನೀಡುವ ಜೊತೆಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸಬೇಕು ಎಂಬುದು ನಿಯಮದಲ್ಲಿದೆ.