ವಡೋದರಾ( ಗುಜರಾತ್) :ಮೋದಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆ ಆಗುತ್ತಲೇ ಇವೆ. ಆತಂಕದ ವಿಷಯ ಎಂದರೆ ಕೊರೊನಾ ನವಜಾತ ಶಿಶುಗಳನ್ನೂ ಬಿಡುತ್ತಿಲ್ಲ. ಅವಳಿ- ಜವಳಿಯಾಗಿ ಜನಿಸಿದ ನವಜಾತ ಮಕ್ಕಳಿಗೆ ಕೋವಿಡ್ ಅಂಟಿಕೊಂಡಿದೆ.
ಅವಳಿ ಶಿಶುಗಳು ಜನಿಸಿ 15 ದಿನದಲ್ಲಿ ಕೊರೊನಾ ವಕ್ಕರಿಸಿದೆ. ಪರಿಣಾಮ ಈ ಹಸುಳೆಗಳು ತೀವ್ರವಾದ ಅತಿಸಾರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದು, ಆ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ದೃಢಪಟ್ಟಿದೆ. ಮಕ್ಕಳನ್ನ ಈಗ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಹಸುಳೆಗಳ ಆರೋಗ್ಯ ಸ್ಥಿರವಾಗಿದ್ದು, ನಿಗಾ ವಹಿಸಲಾಗಿದೆ.
ಈ ಕುರಿತು ವೈದ್ಯಕೀಯ ವಿಭಾಗದ ಶೀತಲ್ ಅಯ್ಯರ್ ಮಾತನಾಡಿದ್ದು, ಸಯಾಜಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಿತ್ಯ 5 ಮಕ್ಕಳು ಕೊರೊನಾಗೆ ತುತ್ತಾಗುತ್ತಿದ್ದಾರೆ ಎಂದಿದ್ದಾರೆ. ಈ ಪರಿಸ್ಥಿತಿ ನಿಭಾಯಿಸಲು, ಹೊಸ ಕೋವಿಡ್ ಕೆರ್ ಸೆಂಟರ್ ಮಾಡಿ ನವಜಾತ ಶಿಶುಗಳ ಆರೋಗ್ಯವನ್ನ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹೆತ್ತವರು ಮತ್ತು ಮಗುವನ್ನು ನೋಡಿಕೊಳ್ಳುವವರಿಂದಲೇ ಸೋಂಕು ಹರಡುತ್ತಿದೆ ಎಂದು ಅಯ್ಯರ್ ಕಳವಳ ವ್ಯಕ್ತಪಡಿಸಿದರು.
ಮಕ್ಕಳಲ್ಲಿ ಜ್ವರ, ಗಂಟಲು ನೋವು ಮುಂತಾದ ಲಕ್ಷಣಗಳು ಕಂಡುಬರುತ್ತಿವೆ. ಕಳೆದ ಹದಿನೈದು ದಿನಗಳಿಂದ ಈ ಅವಳಿಗಳು ಅತಿಸಾರ ಮತ್ತು ವಾಂತಿಯಿಂದ ಬಳಲುತಿದ್ದಾರೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನವಜಾತ ಶಿಶುಗಳ ರಕ್ತದ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ನಿತ್ಯವೂ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಯಾಜಿ ಆಸ್ಪತ್ರೆಯಲ್ಲಿ 8 ರಿಂದ 10 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ವೈದ್ಯೆ ಶೀತಲ್ ಅಯ್ಯರ್ ತಿಳಿಸಿದ್ದಾರೆ.