ಫರಿದಾಬಾದ್ (ಹರಿಯಾಣ) :ಕೇಳಿದಷ್ಟು ವರದಕ್ಷಿಣೆ ನೀಡಿದ ಹೊರತಾಗಿಯೂ ಪತ್ನಿಯ ಕುಟುಂಬ ತನಗೆ ಭರವಸೆ ನೀಡಿದ್ದ ಬಿಎಂಡಬ್ಲ್ಯು (BMW) ಕಾರ್ ನೀಡಲು ವಿಫಲವಾದರು ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಪತ್ನಿಯನ್ನು ಗೋವಾ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪತ್ನಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಆರೋಪಿ ಪತಿ ಹಾಗೂ ಆತನ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 323, 120ಬಿ, 377, 379ಎ, 498ಎ,406, 506, 511ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಿವರ: ಅಬೀರ್ ಗುಪ್ತಾ ಎಂಬಾತ ನೇಪಾಳದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಪೋಷಕರಾದ ಅರವಿಂದ್ ಮತ್ತು ಅಭಾ ಗುಪ್ತಾ ಇಬ್ಬರೂ ವೈದ್ಯರು. ದಂಪತಿ ಹಿಸಾರ್‌ನಲ್ಲಿ ಆಸ್ಪತ್ರೆ ನಡೆಸುತ್ತಿದ್ದಾರೆ. ಹರಿಯಾಣದ ಫರಿದಾಬಾದ್‌ನ ರೇಡಿಯಾಲಜಿಸ್ಟ್ ಆಗಿರುವ ಯುವತಿ ಅಬೀರ್ ಜೊತೆ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಜನವರಿ 26 ರಂದು ಗೋವಾದಲ್ಲಿ ವಿವಾಹವಾಗಿದ್ದರು.
ಬಿಎಂಡಬ್ಲ್ಯೂ ಕಾರ್‌ಗೆ ಬೇಡಿಕೆ ಇಟ್ಟ ವರನ ತಂದೆ :ಮದುವೆ ನಿಶ್ಚಯವಾದ ಕೂಡಲೇ ವರನ ಮನೆಯವರು 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೇಳಿದಷ್ಟು ಹಣವನ್ನೂ ನೀಡಿದ್ದೇವೆ ಎಂದು ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಸಂಬಂಧಿಕರಿಬ್ಬರು ಎರಡು ದಿನಗಳ ಕಾಲ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಯೋಜಿಸಲು ನಿರ್ಧರಿಸಿದ್ದರು. ವರ ಮತ್ತು ವಧುವಿನ ಎರಡೂ ಕುಟುಂಬಗಳು ವೆಚ್ಚವನ್ನು ಸಮಾನವಾಗಿ ಹಂಚಿಕೊಳ್ಳಲು ಒಪ್ಪಿದ್ದರು. ಮದುವೆಯ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಅಬೀರ್ ತಂದೆ ಇದ್ದಕ್ಕಿದ್ದಂತೆ ಬಿಎಂಡಬ್ಲ್ಯೂಗೆ ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ ಕಾರಿನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ವಧುವಿನ ತಂದೆ ತಿಳಿಸಿದ್ದರೂ ನಂತರ ಒದಗಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ವರನ ಮನೆಯವರೊಂದಿಗೆ ಮನವಿ ಮಾಡಿಕೊಂಡು ಮದುವೆ ನೆರವೇರಿಸಿದ್ದಾರೆ.
ನವದಂಪತಿಗೆ ವಿದಾಯ ಹೇಳುವುದಕ್ಕೂ ಮೊದಲು ನಾವು ಕೆಲವೊಂದು ಆಚರಣೆಗಳನ್ನು ನಡೆಸುತ್ತಿದ್ದಾಗ ಅಬೀರ್ ಅವರ ಕುಟುಂಬವು ನಮಗೆ ತಿಳಿಸದೆ, ಅವರ ಪಾಲಿನ ಖರ್ಚನ್ನೂ ಪಾವತಿಸದೆ ಹೋಟೆಲ್‌ನಿಂದ ಚೆಕ್ಔಟ್ ಮಾಡಿಕೊಂಡು ಹೋಗಿದ್ದರು. ಈ ವೇಳೆ ನಾವು ನಮ್ಮ ಸಂಬಂಧಿಕರಿಂದ ಸಾಲ ಪಡೆದು ಬಿಲ್‌ಗಳನ್ನು ಕಟ್ಟಿದೆವು. ಎಲ್ಲಾ ಕ್ರಮಗಳನ್ನು ಪೂರ್ಣಗೊಳಿಸಿದೆವು. ತದನಂತರ ನನ್ನ ಮಗಳು ಮತ್ತು ಅಳಿಯ ವಿಮಾನ ನಿಲ್ದಾಣಕ್ಕೆ ಹೊರಟರು ಎಂದು ವಧುವಿನ ತಂದೆ ತಿಳಿಸಿದರು.