ಪಣಜಿ(ಗೋವಾ): ಜಮ್ಮು- ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದರೆ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೆರೆಯ ದೇಶಕ್ಕೆ ನೇರವಾಗಿ ವಾರ್ನ್ ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ಜಮ್ಮು - ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಇದಕ್ಕೆ ಪಾಕ್ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ ನೇರೆಯ ದೇಶದ ವಿರುದ್ಧ ವಾಗ್ದಾಳಿ ನಡೆಸಿದರು. ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗಡಿ ನಿಯಮ ಉಲ್ಲಂಘನೆ, ಕಾಶ್ಮೀರದಲ್ಲಿ ನಾಗರಿಕರ ಕೊಲೆಯಂತಹ ಕೃತ್ಯ ನಿರಂತರವಾಗಿ ಮುಂದುವರಿದರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದರು.
ಗೋವಾ ಅಭಿವೃದ್ಧಿಗೆ ಪರಿಕ್ಕರ್ ಕಾರಣ
ಗೋವಾದಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ವಿಧಿ - ವಿಜ್ಞಾನ ವಿಶ್ವವಿದ್ಯಾಲಯ ಅನೇಕ ವಿದ್ಯಾರ್ಥಿಗಳಿಗೆ ಸಹಾಯವಾಗಲಿದ್ದು, ಫಾರೆನ್ಸಿಕ್ ಸೈನ್ಸ್ ಅಭ್ಯಾಸ ಮಾಡಲು ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಹಿಂದಿನ ಗೋವಾ ಸಿಎಂ ಮನೋಹರ್ ಪರಿಕ್ಕರ್ ಈ ಚಿಕ್ಕ ರಾಜ್ಯ ಎಲ್ಲೆಡೆ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಹೀಗಾಗಿ ಕಳೆದ 10 ವರ್ಷಗಳಿಂದ ಹೆಚ್ಚಿನ ಅಭಿವೃದ್ಧಿ ಕಂಡಿದ್ದು, ದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದರು.