ಸಿಟಾಲ್ಕುಚಿ(ಪಶ್ಚಿಮ ಬಂಗಾಳ): ಚುನಾವಣೆ ನಂತರ ನಡೆದ ಹಿಂಸಾಚಾರ ಪ್ರದೇಶಗಳಿಗೆ ಇಂದು ಭೇಟಿ ನೀಡಲು ಮುಂದಾದ ಪಶ್ಚಿಮ ಬಂಗಾಳ ಗವರ್ನರ್ ವಿರುದ್ಧ ಕಪ್ಪು ಬಾವುಟ ತೋರಿಸಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಪ್ ಧಂಖರ್ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಚ್ ಬೆಹಾರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ವರ್ತನೆ ಸರಿಯಿರಲಿಲ್ಲ ಎಂದಿರುವ ಅವರು, ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿತ್ತು ಎಂದಿದ್ದಾರೆ.
ನಾನು ಸಿಟಾಲ್ಕುಚಿ ಪ್ರದೇಶಕ್ಕೇ ಭೇಟಿ ನೀಡುವುದು ಅವರಿಗೆ ಇಷ್ಟವಿರಲಿಲ್ಲ. ಅದೇ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಚುನಾವಣೆ ನಂತರ ನಡೆದ ಹಿಂಸಾಚಾರ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ನಾನು ಹೇಳಿದಾಗ, ಅದಕ್ಕೆ ಅನುಮತಿ ನೀಡಲಿಲ್ಲ. ಜತೆಗೆ ಆ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು. ಇದರಿಂದ ನಾನು ದಿಗ್ಬ್ರಮೆಗೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಸಿಎಂಗೆ ಪತ್ರ ಬರೆದು ನನ್ನ ಪ್ರಯಾಣ ಪ್ರಾರಂಭಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಬಂಗಾಳ ಹಿಂಸಾಚಾರ ನಡೆದ ಪ್ರದೇಶಗಳಿಗೆ ಗುರುವಾರ ರಾಜ್ಯಪಾಲ ಧಂಕರ್ ಭೇಟಿ
ನಾನು ಭೇಟಿ ನೀಡ್ತಿದ್ದ ವೇಳೆ ಕೆಲವರು ಕಪ್ಪು ಧ್ವಜ ತೋರಿಸಿದ್ದಾರೆ. ಜತೆಗೆ ನನ್ನ ಕಾರು ಚಲಾಯಿಸುತ್ತಿದ್ದ ಮಾರ್ಗ ಬಂದ್ ಮಾಡಿದ್ದಾರೆ. ಇದರ ಹಿಂದೆ ಟಿಎಂಸಿ ಹಾಗೂ ಮಮತಾ ಬ್ಯಾನರ್ಜಿ ಕೈವಾಡವಿದೆ ಎಂದು ಅವರು ತಿಳಿಸಿದ್ದಾರೆ.