ನವದೆಹಲಿ: ರಾಜಕೀಯ ಒತ್ತಡದ ಕಾರಣಗಳಿಂದ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ಗೆ ತ್ವರಿತವಾಗಿ ನಿಯಂತ್ರಕ ಅನುಮೋದನೆ ನೀಡಲಾಗಿತ್ತು ಎಂದು ಹೇಳುವ ಮಾಧ್ಯಮ ವರದಿಗಳು ದಿಕ್ಕು ತಪ್ಪಿಸುವ ಮತ್ತು ತಪ್ಪು ವರದಿಗಳು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ತುರ್ತು ಬಳಕೆಯ ಅವಕಾಶಕ್ಕಾಗಿ ಕೋವಿಡ್-19 ಲಸಿಕೆಗಳಿಗೆ ವೈಜ್ಞಾನಿಕ ವಿಧಾನ ಅನುಸರಿಸಿ ಮತ್ತು ನಿಗದಿತ ಮಾನದಂಡಗಳಿಗೆ ಬದ್ಧವಾಗಿ ಅನುಮೋದನೆ ನೀಡಲಾಗಿತ್ತು ಎಂದು ಅದು ಹೇಳಿದೆ.
ಸ್ಥಳೀಯ ಕೋವಿಡ್-19 ಲಸಿಕೆ ಕೋವಾಕ್ಸಿನ್‌ನ ತಯಾರಕರಾದ ಭಾರತ್ ಬಯೋಟೆಕ್ ರಾಜಕೀಯ ಒತ್ತಡದಿಂದಾಗಿ ಕೆಲವು ಪ್ರಕ್ರಿಯೆಗಳನ್ನು ಬಿಟ್ಟು ಕ್ಲಿನಿಕಲ್ ಪ್ರಯೋಗಗಳನ್ನು ವೇಗಗೊಳಿಸಬೇಕಾಯಿತು ಎಂದು ಹೇಳುವ ಮಾಧ್ಯಮ ವರದಿಗಳು ಪ್ರಕಟವಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಲಸಿಕೆಗಾಗಿ ನಡೆಸಿದ ಕ್ಲಿನಿಕಲ್ ಪ್ರಯೋಗಗಳ ಮೂರು ಹಂತಗಳಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಈ ಮಾಧ್ಯಮ ವರದಿಗಳು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ, ಸುಳ್ಳುಗಳಿಂದ ಕೂಡಿದ ಮತ್ತು ತಪ್ಪು ಮಾಹಿತಿಯ ವರದಿಗಳಾಗಿವೆ.
ಭಾರತ ಸರ್ಕಾರ ಮತ್ತು ರಾಷ್ಟ್ರೀಯ ನಿಯಂತ್ರಕ ಅಂದರೆ CDSCO ತುರ್ತು ಬಳಕೆಯ ದೃಢೀಕರಣಕ್ಕಾಗಿ ಕೋವಿಡ್-19 ಲಸಿಕೆಗಳನ್ನು ಅನುಮೋದಿಸುವಲ್ಲಿ ವೈಜ್ಞಾನಿಕ ವಿಧಾನವನ್ನು ಅನುಸರಿಸಿದೆ ಮತ್ತು ನಿಯಮಾವಳಿಗಳನ್ನು ಅನುಸರಿಸಿದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಸಚಿವಾಲಯ ತಿಳಿಸಿದೆ.