ಇಂದು ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾಳೆ. ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲೂ ವಿಶೇಶ ಸಾಧನೆ ಮಾಡುವ ಮೂಲಕ ಪುರುಷನಷ್ಟೇ ಸರಿಸಮಾನವಾಗಿ ಬೆಳೆಯುತ್ತಿದ್ದಾಳೆ. ಅಮ್ಮನಾಗಿ, ಅಕ್ಕವನಾಗಿ, ಪತ್ನಿಯಾಗಿ, ತಂಗಿಯಾಗಿ ಹೀಗೆ ಅನೇಕ ರೂಪಗಳಲ್ಲಿ ಜೀವನ ರೂಪಿಸಿಕೊಟ್ಟ ಸ್ತ್ರೀಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಲೇಬೇಕು. ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2023ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.
ಮಹಿಳಾ ದಿನಾಚರಣೆಯ ಇತಿಹಾಸ: ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸಂಭ್ರಮಿಸುವ ಮಹತ್ವದ ದಿನ ಇದಾಗಿದೆ. ಮಹಿಳಾ ದಿನದ ಪರಿಕಲ್ಪನೆಯು 1900 ರ ದಶಕದ ಆರಂಭದಲ್ಲಿ ಬೆಳಕಿದೆ ಬಂದಿದೆ. 28 ಫೆಬ್ರವರಿ 1909 ರಂದು ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಅಂದು 15,000 ಮಹಿಳೆಯರು ಕಡಿಮೆ ಸಮಯ, ಉತ್ತಮ ವೇತನ ಮತ್ತು ಮತದಾನದ ಹಕ್ಕುಗಳನ್ನು ಒತ್ತಾಯಿಸಿ ನ್ಯೂಯಾರ್ಕ್ ನಗರದಲ್ಲಿ ಮೆರವಣಿಗೆ ನಡೆಸಿದರು. 1910 ರ ವೇಳೆಗೆ ಯುರೋಪ್‌ನ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಎರಡನೇ ಅಂತಾರಾಷ್ಟ್ರೀಯ ಕಾರ್ಮಿಕ ಮಹಿಳೆಯರ ಸಮ್ಮೇಳನ ನಡೆಸಲಾಯಿತು. ಜರ್ಮನಿಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಮಹಿಳಾ ಕಚೇರಿಯ ನೇತೃತ್ವ ವಹಿಸಿದ್ದ ಕ್ಲಾರಾ ಜೆಟ್ಕಿನ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದ ಕಲ್ಪನೆಯನ್ನು ಮಂಡಿಸಿದ್ದರು. ಆ ಬಳಿಕ, ಮಾರ್ಚ್ 9, 1911 ರಂದು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ವಿಶ್ವಸಂಸ್ಥೆಯು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಮಹಿಳೆಯರ ಹಕ್ಕುಗಳು ಹಾಗೂ ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಹೊಸ ಥೀಮ್ನೊಂದಿಗೆ ಈ ದಿನಾಚರಣೆ ನಡೆಯುತ್ತದೆ.
ಇದನ್ನೂ ಓದಿ:ಮಹಿಳಾ ದಿನಾಚರಣೆ: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ನಾಳೆ ಉಚಿತ ಪ್ರಯಾಣ