ಪಣಜಿ (ಗೋವಾ): ನಾಳೆ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು, ಕೈಗಾರಿಕಾ ಕಾರ್ಮಿಕರು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವರರಿಗೆ ಗೋವಾ ಸರ್ಕಾರ ವೇತನಸಹಿತ ರಜೆ ನೀಡಿ ಸೋಮವಾರ ಅಧಿಸೂಚನೆ ಹೊರಡಿಸಿದೆ. ಸಿಎಂ ಪ್ರಮೋದ್ ಸಾವಂತ್ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ಮತ್ತು ಖಾಸಗಿ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ರಜೆ ಘೋಷಿಸಿರುವ ನಿರ್ಧಾರಕ್ಕೆ ಕಾನೂನಿನ ಮಾನ್ಯತೆ ಬೇಕು ಎಂದು ಗೋವಾ ಸ್ಟೇಟ್ ಇಂಡಸ್ತ್ರೀಸ್ ಅಸೋಸಿಯೇಶನ್ ಹೇಳಿದೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ದಾಮೋದರ್ ಕೋಚ್ಕರ್ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. "ಇದು ಸಂಪೂರ್ಣವಾಗಿ ಅಸಂಬದ್ಧ ಮತ್ತು ಮೂರ್ಖತನದ ತೀರ್ಮಾನ. ಚುನಾವಣಾ ಲಾಭಕ್ಕಾಗಿ ಕೈಗಾರಿಕೆಗಳನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಇಂತಹ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಕಾನೂನಿನ ಮೊರೆ ಹೋಗಬೇಕಾಗಿದೆ ಎಂದು ಹೇಳಿದರು.