ಕಾನ್ಪುರ (ಉತ್ತರ ಪ್ರದೇಶ):ಮಕ್ಕಳು ಮಾಡುವ ಚೇಷ್ಟೆ ಎಲ್ಲರಿಗೂ ಇಷ್ಟ. ಆದರೆ, ಕೆಲವೊಮ್ಮೆ ಇಂತಹ ಚೇಷ್ಟೆಯೇ ಕುಟುಂಬದವರನ್ನು ಆತಂಕಕ್ಕೆ ದೂಡುವಂತೆಯೂ ಮಾಡುತ್ತದೆ. ಇಂತಹದ್ದೊಂದು ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದ್ದು, ಮಗಳು ಮಾಡಿದ ಚೇಷ್ಟೆಗೆ ತಾಯಿ ಭಯಗೊಂಡ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸ್ ತನಿಖೆಯಲ್ಲಿ ಅಚ್ಚರಿ ಅಂಶ ಬಹಿರಂಗವಾಗಿದೆ.
ಇಲ್ಲಿನ ರಾವತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಸ್ವಾನ್‌ಪುರ ನಿವಾಸಿ ಮೇಘಾ ಪಾಂಡೆ ಎಂಬುವವರು ಪತಿ ಮತ್ತು ತಮ್ಮ ಇಬ್ಬರು ಪುತ್ರಿಯರೊಂದಿಗೆ ವಾಸಿಸುತ್ತಿದ್ದಾರೆ. ಕೆಲ ದಿನಗಳಿಂದ ಮನೆ ಬಳಿ ನಿರಂತರವಾಗಿ ಬೆದರಿಕೆ ಪತ್ರಗಳು ಪತ್ತೆಯಾಗಿವೆ. ಹೀಗೆ ಪತ್ತೆಯಾದ ಬೆದರಿಕೆ ಪತ್ರಯೊಂದರಲ್ಲಿ 50 ಸಾವಿರ ಹಣಕ್ಕೆ ಬೇಡಿಕೆ ಇಡಲಾಗಿತ್ತು.
ಅಲ್ಲದೇ, ಹಣ ನೀಡದಿದ್ದರೆ ಹಿರಿಯ ಮಗಳನ್ನು ಕೊಲೆ ಮಾಡುವುದಾಗಿಯೂ ಬರೆಯಲಾಗಿತ್ತು. ಹೀಗಾಗಿಯೇ ಮೇಘಾ ಪಾಂಡೆ ಭಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಇದಾದ ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ಹಲವು ಆಯಾಮಗಳಲ್ಲಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಅಚ್ಚರಿ ಅಂಶ ಬೆಳಕಿಗೆ ಬಂದಿದೆ. ತನಿಖೆಯ ಭಾಗವಾಗಿ ಪೊಲೀಸರು ಮೇಘಾ ಪಾಂಡೆ ಮನೆಯಲ್ಲೂ ತಪಾಸಣೆ ನಡೆಸಿದ್ದಾರೆ. ನಾಲ್ಕನೇ ತರಗತಿ ಓದುತ್ತಿರುವ ಮೇಘಾ ಪಾಂಡೆ ಅವರ ಮಗಳ ನೋಟ್ನಲ್ಲಿ ಅನುಮಾನಾಸ್ಪದ ಬರಹಗಳು ಪತ್ತೆಯಾಗಿವೆ.
ದೂರುದಾರರ ಮನೆಯಲ್ಲೇ ಅನುಮಾನಾಸ್ಪದ ಬರಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೇಘಾ ಪಾಂಡೆ ಅವರ ಮಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆಗ ತಾನೇ ಈ ರೀತಿಯ ಪತ್ರ ಬರೆದು, ಅದನ್ನು ಗೇಟ್ನ ಬಳಿ ಇಟ್ಟಿದ್ದಾಗಿ ಬಾಲಕಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ರಾವತ್‌ಪುರ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
ಅಲ್ಲದೇ, ಯಾರ ಸಲಹೆಯ ಮೇರೆಗೆ ಈ ರೀತಿ ಮಾಡುತ್ತಿದ್ದೀರಿ ಎಂದೂ ಬಾಲಕಿಗೆ ಪ್ರಶ್ನಿಸಲಾಯಿತು. ಇದಕ್ಕೆ ಬಾಲಕಿ ತಾನೇ ಸ್ವಂತ ಇಚ್ಛೆಯಿಂದ ಎಲ್ಲ ಪತ್ರ ಬರೆದಿದ್ದೇನೆ ಎಂದೂ ತಿಳಿಸಿದ್ದಾಳೆ. ಆದ್ದರಿಂದ ಇನ್ಮುಂದೆ ಈ ರೀತಿ ಮಾಡದಂತೆ ಬಾಲಕಿಗೆ ತಿಳಿವಳಿಕೆ ಹೇಳಿ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಶಾಲೆಯ ಎಲ್ಲ ಸಿಬ್ಬಂದಿ ವಿರುದ್ಧ ಕೇಸ್ ದಾಖಲು