ನವದೆಹಲಿ: ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಉತ್ತರ ದೆಹಲಿ ಹೆದ್ದಾರಿಯಲ್ಲಿ ನಿಂತಿದ್ದ ಬಸ್‌ನಲ್ಲಿ ಕುಳಿತು ವಾಂತಿ ಮಾಡಿಕೊಳ್ಳುತ್ತಿರುವಾಗ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಮೃತ ಯುವತಿಯನ್ನು ಬೇಬಿ ಎಂದು ಗುರುತಿಸಲಾಗಿದೆ. ಆಕೆ ತನ್ನ ಸಹೋದರನಿಗೆ ರಾಖಿ ಕಟ್ಟಲು ನೋಯ್ಡಾದಿಂದ ಲುಧಿಯಾನಕ್ಕೆ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ. ತಕ್ಷಣ ಯುವತಿಯನ್ನು ಸಮೀಪದ ಸತ್ಯವಾಡಿ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಚಾಲಕ ತನ್ನ ಟ್ರಕ್ ಅನ್ನು ಬಸ್‌ನ ಪಕ್ಕದಲ್ಲೇ ಚಲಾಯಿಸಿದ್ದರಿಂದ ಯುವತಿಯ ತಲೆ ಅಪ್ಪಚ್ಚಿಯಾಗಿದೆ.
ಅಪಘಾತ ಹೇಗಾಯಿತು?: ದೆಹಲಿಯ ಐಎಸ್‌ಬಿಟಿ ಕಾಶ್ಮೀರಿ ಗೇಟ್‌ನಿಂದ ಹರಿಯಾಣ ರೋಡ್‌ವೇಸ್ ಬಸ್‌ನಲ್ಲಿ ಯುವತಿ ತನ್ನ ಕುಟುಂಬದೊಂದಿಗೆ ಲೂಧಿಯಾನಕ್ಕೆ ಹೋಗುತ್ತಿದ್ದಳು. ಸಹೋದರಿಯರಿಬ್ಬರು ತಮ್ಮ ಸಹೋದರನಿಗೆ ರಾಖಿ ಕಟ್ಟಲು ಲೂಧಿಯಾನಕ್ಕೆ ಹೋಗುತ್ತಿದ್ದ ವೇಳೆ ಒಬ್ಬ ಯುವತಿಗೆ ವಾಂತಿ ಶುರುವಾಗಿದೆ. ಅಲಿಪುರ ಶನಿ ದೇವಸ್ಥಾನದ ಬಳಿ ಯುವತಿ ವಾಂತಿ ಮಾಡಿಕೊಳ್ಳಲು ಆರಂಭಿಸಿದಾಗ ಬಸ್ಸನ್ನು ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಯುವತಿ ಬಸ್ಸಿನ ಕಿಟಕಿಯಿಂದ ಕತ್ತು ಹೊರಕ್ಕೆ ಚಾಚಿ ವಾಂತಿ ಮಾಡಿಕೊಳ್ಳುತ್ತಿದ್ದಳು. ಆಗ ಅತಿವೇಗದಲ್ಲಿ ಬಂದ ಟ್ರಕ್ ಯುವತಿಯ ಕುತ್ತಿಗೆಗೆ ಡಿಕ್ಕಿ ಹೊಡೆದಿದೆ. ಚಾಲಕನು ಟ್ರಕ್ ನಿಲ್ಲಿಸದೆ ಪರಾರಿಯಾಗಿದ್ದಾನೆ.