ಬಾರಾಮುಲ್ಲಾ (ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಇನ್ನು ಮುಂದೆ ಎಂದಿಗೂ ವಾಪಸ್ ಸಿಗುವುದಿಲ್ಲ. ಆ ಸ್ಥಾನಮಾನ ಮತ್ತೆ ತಂದು ಕೊಡುತ್ತೇನೆ ಎಂಬ ಪೊಳ್ಳು ಭರವಸೆಯನ್ನು ನಾನು ನೀಡುವುದಿಲ್ಲ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ನಿಂದ ಹೊರಬಂದಿರುವ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಅವರು ಹೇಳಿದರು.
ಬಾರಾಮುಲ್ಲಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ ಮತ್ತು 2 ವರ್ಷಗಳ ಹಿಂದೆ ಹಿಂತೆಗೆದುಕೊಳ್ಳಲಾದ ಸಂವಿಧಾನದ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಇದನ್ನು ಮರು ಪಡೆಯಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕು. ಇದು ಸಾಧ್ಯವಿಲ್ಲ ಎಂಬುದು ನನಗೆ ತಿಳಿದಿದೆ. ಇದರ ಹೆಸರಿನಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ಆಜಾದ್ ಹೇಳಿದರು.
370 ನೇ ವಿಧಿಯನ್ನು ವಾಪಸ್ ತರುವ ಕುರಿತು ಪೊಳ್ಳು ಭರವಸೆ ನೀಡುವುದಿಲ್ಲ. ಬೇರೆ ಯಾವುದೇ ರಾಜಕೀಯ ಪಕ್ಷಗಳು ಇದನ್ನು ಹೇಳಿದರೆ ನಂಬಬೇಡಿ ಎಂದು ಮಾತ್ರ ಹೇಳಬಲ್ಲೆ. ಆ ವಿಶೇಷ ಸ್ಥಾನಮಾನ ಇನ್ನು ಮುಚ್ಚಿದ ಬಾಗಿಲು ಎಂದು ಅವರು ಸ್ಪಷ್ಟಪಡಿಸಿದರು.
ರಾಜಕೀಯ ಜ್ವಾಲೆಯು ಕಾಶ್ಮೀರದಲ್ಲಿ 1 ಲಕ್ಷ ಜನರ ಪ್ರಾಣ ಬಲಿ ತೆಗೆದುಕೊಂಡಿದೆ. 5 ಲಕ್ಷ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ನಾನು ಸುಳ್ಳು ಹೇಳಿ ಜನರನ್ನು ಶೋಷಿಸಿ ಮತ ಕೇಳುವುದಿಲ್ಲ. ಚುನಾವಣೆಯಲ್ಲಿ ನನಗೆ ಗೆದ್ದರೂ, ಸೋತರೂ ನನ್ನಿಂದಾಗುವ ಕೆಲಸವನ್ನು ಮಾತ್ರ ನಾನು ಮಾಡಬಲ್ಲೆ ಎಂದು ಆಜಾದ್ ಜನರಿಗೆ ಮನವರಿಕೆ ಮಾಡಿದರು.