ಜೈಪುರ (ರಾಜಸ್ಥಾನ) : ರಾಜಸ್ಥಾನದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಅಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಸಚಿನ್ ಪೈಲಟ್ ಜನ ಸಂಘರ್ಷ ಯಾತ್ರೆ ನಡೆಸಿದ್ದು, ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರು ಕಾಂಗ್ರೆಸ್ ನಾಯಕರ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಲು ಸಮ್ಮತಿಸಿದ್ದಾರೆ. ಖರ್ಗೆ ಸೋಮವಾರ ದೆಹಲಿಯಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುವರು ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಕೊನೆ ಉಸಿರಿರುವರೆಗೆ ರಾಜಸ್ಥಾನಕ್ಕಾಗಿ, ಪಕ್ಷಕ್ಕಾಗಿ ದುಡಿಯುತ್ತೇನೆ: ಸಚಿನ್ ಪೈಲಟ್
ರಾಜಸ್ಥಾನ ಭವನದ ಶಂಕು ಸ್ಥಾಪನೆ: ಮುಖ್ಯಮಂತ್ರಿಗಳ ಕಚೇರಿಯು ಗೆಹ್ಲೋಟ್ ಅವರ ದೆಹಲಿ ಭೇಟಿಯನ್ನು ದೃಢೀಕರಿಸುವ ಕಾರ್ಯಕ್ರಮದ ಮಾಹಿತಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ರಾಜಸ್ಥಾನ ಭವನದ ಶಂಕುಸ್ಥಾಪನೆಯನ್ನೂ ಸಿಎಂ ಮಾಡಲಿದ್ದಾರೆ. ಈ ತಿಂಗಳ ಅಂತ್ಯದೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮೂರು ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಆಂದೋಲನ ನಡೆಸುವುದಾಗಿ ಪೈಲಟ್ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಈ ಪ್ರಾಸ್ತಾವಿತ ಸಭೆ ಮಹತ್ವ ಪಡೆದಿದೆ.
ಹಗರಣಗಳ ತನಿಖೆ ನಡೆಸುವಂತೆ ಪೈಲಟ್ ಒತ್ತಾಯ: ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪೈಲಟ್ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹಿರಿಯ ನಾಯಕರ ಪ್ರಕಾರ, ಮೇ 26 ರಂದು ಎಲ್ಲ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ವರಿಷ್ಠರ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ನಂತರ ಮುಂದೂಡಲಾಯಿತು.