ವೈಶಾಲಿ (ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್ ಪ್ರತಿಮೆ ವಿಚಾರವಾಗಿ ತಂದೆ ರಾಜ್ಕಪೂರ್ ಸಿಂಗ್ ಅವರನ್ನು ಬಂಧಿಸಿದ ಘಟನೆಯು ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ವಿಧಾನಸಭೆಯಲ್ಲಿ ಪ್ರತಿ ಪಕ್ಷದ ಸದಸ್ಯರು ಕೋಲಾಹಲ ಎಬ್ಬಿಸಿದ್ದಾರೆ.
2022ರಲ್ಲಿ ಲಡಾಖ್‌ನ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಬಿಹಾರದ ಯೋಧ ಜೈ ಕಿಶೋರ್ ಸಿಂಗ್ ಹುತಾತ್ಮರಾಗಿದ್ದರು. ತಮ್ಮ ಹುತಾತ್ಮ ಮಗನ ಸ್ಮರಣಾರ್ಥವಾಗಿ ತಂದೆ ರಾಜ್ ಕಪೂರ್ ಸಿಂಗ್ ಗ್ರಾಮದ ಸರ್ಕಾರಿ ಜಾಗದಲ್ಲಿ ಪ್ರತಿಮೆ ಸ್ಥಾಪಿಸಿದ್ದರು. ಆದರೆ, ಜಾಗದ ಮತ್ತೊಂದು ಭಾಗದಲ್ಲಿ ಹರಿನಾಥ ರಾಮ್ ಎಂಬುವರರಿಗೆ ಸೇರಿದ ಭೂಮಿ ಇದೆ. ಇದರಿಂದ ವಿವಾದ ಉಂಟಾಗಿದ್ದು, ಪೊಲೀಸರು ರಾಜ್ಕಪೂರ್ ಸಿಂಗ್ ಅವರಿಗೆ ಥಳಿಸಿ, ಬಂಧನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹುತಾತ್ಮ ಯೋಧನ ತಂದೆಗೆ ಥಳಿಸಿದ ಬಗ್ಗೆ ವರದಿಯಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್, ಸಿಎಂ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಬಜೆಟ್ ಅಧಿವೇಶನದ ಮೂರನೇ ದಿನವಾದ ಬುಧವಾರ ಬಿಜೆಪಿ ಶಾಸಕರು ಘಟನೆಯನ್ನು ವಿರೋಧಿಸಿ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಹುತಾತ್ಮ ಯೋಧನ ತಂದೆಗೆ ಅವಮಾನ - ಬಿಜೆಪಿ ಆರೋಪ: ಪ್ರತಿಪಕ್ಷ ನಾಯಕ ವಿಜಯ್ ಕುಮಾರ್ ಸಿನ್ಹಾ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಶಿಸ್ತು ಕಾಪಾಡುವಂತೆ ಸ್ಪೀಕರ್ ಅವಧೇಶ್ ನಾರಾಯಣ್ ಸಿಂಗ್ ಎಚ್ಚರಿಕೆ ನೀಡಿದರು. ಬಿಜೆಪಿ ಶಾಸಕರ ಕೈಯಲ್ಲಿದ್ದ ಪೋಸ್ಟರ್‌ಗಳನ್ನು ಕಿತ್ತುಕೊಳ್ಳುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್ ಸೂಚಿಸಿದರು. ಗಾಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ತಂದೆಗೆ ನಿತೀಶ್ ಸರ್ಕಾರ ಅವಮಾನಿಸಿದೆ ಎಂದು ಬಿಜೆಪಿಯ ಸಂಜಯ್ ಸಿಂಗ್ ಆರೋಪಿಸಿದರು.