ನವದೆಹಲಿ:ಇಂಡೋನೇಷ್ಯಾದ ಪ್ರಮುಖ ಪ್ರಾಂತ್ಯವಾದ ಬಾಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಅಲ್ಲಿಗೆ ತೆರಳಲಿರುವ ಅವರು ಸುಮಾರು 10 ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಇದರ ಜತೆಗೆ ಇಂಡೋನೇಷ್ಯಾದಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯ ಕಾರ್ಯಕ್ರಮವೊಂದರಲ್ಲಿ ಮಾತನಾಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ತಿಳಿಸಿದ್ದಾರೆ.
ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಮತ್ತು ಅದರ ಪರಿಣಾಮಗಳೂ ಸೇರಿದಂತೆ ಜಾಗತಿಕ ಮಟ್ಟದ ವಿವಿಧ ಸವಾಲುಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕತೆ, ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಪರಿಸರ ಮೊದಲಾದ ವಿಚಾರಗಳ ಬಗ್ಗೆ ಮೋದಿ ಇತರ ನಾಯಕರ ಜೊತೆ ಮಾತುಕತೆ ನಡೆಸುವರು ಎಂದು ವಿನಯ್ ಕ್ವಾತ್ರಾ ಮಾಹಿತಿ ನೀಡಿದರು.