ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹತ್ವದ ಜಿ20 ಶೃಂಗಸಭೆಯ ಮೊದಲ ದಿನ ಯಶಸ್ವಿಯಾಗಿದ್ದು, ಇಂದು ವಿಶ್ವ ನಾಯಕರ ಸಮಾವೇಶ 2ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲು ನಾಯಕರು ದೆಹಲಿಯ ರಾಜ್ ಘಾಟ್‌ಗೆ ಭೇಟಿ ನೀಡುವುದರೊಂದಿಗೆ ಶೃಂಗದ 2ನೇ ದಿನದ ಕಾರ್ಯಕ್ರಮ ಪ್ರಾರಂಭವಾಗಿದೆ.
ಇಂದಿನ ವೇಳಾಪಟ್ಟಿ:
- ಬೆಳಗ್ಗೆ 8:15ರಿಂದ 9 ಗಂಟೆ- ಎಲ್ಲ ನಾಯಕರು, ನಿಯೋಗದ ಮುಖ್ಯಸ್ಥರು, ಪ್ರತಿನಿಧಿಗಳು ತಮ್ಮ ತಮ್ಮ ವಾಹನಗಳಲ್ಲಿ ರಾಜಘಾಟ್‌ಗೆ ತಲುಪಿದರು.
- ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವನಾಯಕರು ಗೌರವ ಸಲ್ಲಿಸಲಿದರು. ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ಗಾಯನ ಕಾರ್ಯಕ್ರಮ ನಡೆಯಿತು.
- ನಂತರ ವಿಶ್ವ ನಾಯಕರು ಮತ್ತು ಎಲ್ಲ ನಿಯೋಗದ ಮುಖ್ಯಸ್ಥರು, ಪ್ರತಿನಿಧಿಗಳು ಭಾರತ ಮಂಟಪದ ಲಾಂಜ್ ಕಡೆಗೆ ಹೊರಟರು.
- 10:15 ರಿಂದ 10:30ರ ವರೆಗೆ 'ಭಾರತ ಮಂಟಪ'ದ ದಕ್ಷಿಣ ಪ್ಲಾಜಾದಲ್ಲಿ ಗಿಡ ನೆಡುವ ಕಾರ್ಯಕ್ರಮ.
- 10:30 ರಿಂದ ಮಧ್ಯಾಹ್ನ 12:30ರ ತನಕ ಶೃಂಗದ 3ನೇ ಕಲಾಪ "ಒಂದು ಭವಿಷ್ಯ" ಕುರಿತು ಚರ್ಚೆ ನಡೆಯಲಿದೆ. ಸಭೆಯ ಅಂತ್ಯದಲ್ಲಿ ನಿರ್ಣಯ ಮಂಡನೆ, ಒಪ್ಪಿಗೆ ಮುಂದಿನ ಶೃಂಗಸಭೆ ನಡೆಯುವ ದೇಶಕ್ಕೆ ಅಧ್ಯಕ್ಷೀಯ ಜವಾಬ್ದಾರಿ ಹಸ್ತಾಂತರ ನಡೆಯಲಿದೆ.
'ದೆಹಲಿ ಘೋಷಣೆ' ಅಂಗೀಕಾರ:ಇದಕ್ಕೂ ಮುನ್ನ ಶನಿವಾರ 'ದೆಹಲಿ ಘೋಷಣೆ'ಯನ್ನು ಅಂಗೀಕರಿಸಲಾಯಿತು. ಪ್ರಾದೇಶಿಕ ಸಮಗ್ರತೆ, ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ರಾಷ್ಟ್ರಗಳಿಗೆ ಅದು ಕರೆ ನೀಡಿದೆ. ಘೋಷಣೆಯ ಪ್ರಮುಖಾಂಶವೆಂದರೆ ರಷ್ಯಾ- ಉಕ್ರೇನ್ ಯುದ್ಧ ವಿಚಾರ ಸೇರಿದಂತೆ ಘೋಷಣೆಯ ಪೂರ್ಣ ಪಠ್ಯಕ್ಕೆ ಶೇ 100ರಷ್ಟು ಒಮ್ಮತದ ಒಪ್ಪಿಗೆಯೊಂದಿಗೆ ಅಂಗೀಕರಿಸಲಾಯಿತು.
ದೆಹಲಿ ಘೋಷಣೆಯ 5 ಪ್ರಮುಖ ಅಂಶಗಳು:
- ಪ್ರಬಲ, ಸುಸ್ಥಿರ, ಸಮತೋಲಿತ ಹಾಗೂ ಒಳಗೊಳ್ಳುವ ಬೆಳವಣಿಗೆ.
- ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯ ವೇಗವನ್ನು ಹೆಚ್ಚಿಸುವುದು.
- ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ.
- 21ನೇ ಶತಮಾನಕ್ಕಾಗಿ ಬಹು ರಾಷ್ಟ್ರೀಯ ಸಂಸ್ಥೆಗಳು.
- ಬಹುಪಕ್ಷೀಯತೆಯನ್ನು ಪುನಶ್ಚೇತನಗೊಳಿಸುವುದು ಸೇರಿದೆ.