ನವದೆಹಲಿ:ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 18ನೇ ಜಿ20 ಶೃಂಗಸಭೆಯ ಮೊದಲ ದಿನದ ಸಭೆ ನಿನ್ನೆ ಯಶಸ್ವಿಯಾಗಿ ನಡೆಯಿತು. 2ನೇ ಮತ್ತು ಕೊನೆಯ ದಿನವಾದ ಇಂದು ವಿಶ್ವದ ಗಣ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ನಮಿಸಿದರು. ಬಳಿಕ ಸಮಾಧಿ ಬಳಿ ಶಾಂತಿಗೀತೆ ಗಾಯನದಲ್ಲಿ ಪಾಲ್ಗೊಂಡರು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ರಾಜ್‌ಘಾಟ್‌ಗೆ ಭೇಟಿ ನೀಡಿದ ಮೊದಲಿಗರು. ಬಳಿಕ ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪಿಎಂ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಗೌರವ ನಮನ ಸಲ್ಲಿಸಿದರು. ಮುಖ್ಯಾಂಶಗಳು..
- ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ರಾಜ್‌ಘಾಟ್‌ಗೆ ಆಗಮಿಸಿ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿದರು.
- ಸ್ಪೇನ್ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ, ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಹಾಗೂ ಓಮನ್‌ನ ಉಪಪ್ರಧಾನಿ ಅಸಾದ್ ಬಿನ್ ತಾರಿಕ್ ಬಿನ್ ತೈಮೂರ್ ಅಲ್ ಸೈದ್ ಅವರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ರಾಜ್‌ಘಾಟ್‌ಗೆ ಆಗಮಿಸಿ ವಿಶ್ವದ ಹಲವು ನಾಯಕರು: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅಧ್ಯಕ್ಷ ಮಸತ್ಸುಗು ಅಸಕಾವಾ, ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಸೇರಿದಂತೆ ಇತರ ನಾಯಕರು ಮತ್ತು ಪ್ರತಿನಿಧಿಗಳು ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.
- ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಗುಚ್ಛ ಅರ್ಪಿಸಿದರು. ಬಳಿಕ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಪ್ರಧಾನಿ ಲಿ ಕಿಯಾಂಗ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಗುಚ್ಛ ಅರ್ಪಿಸಿದರು.