ಕರ್ನಾಟಕ

karnataka

ETV Bharat / bharat

ಜಿ20 ಶೃಂಗಸಭೆಗೆ ಜಾಗತಿಕ ನಾಯಕರ ಆಗಮನ: ಇಟಲಿ ಪ್ರಧಾನಿಯನ್ನು ಸ್ವಾಗತಿಸಿದ ಸಚಿವೆ ಶೋಭಾ ಕರಂದ್ಲಾಜೆ

G20 summit: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗಾಗಿ ವಿವಿಧ ರಾಷ್ಟ್ರಗಳ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ನಾಯಕರನ್ನು ಸ್ವಾಗತಿಸಲಾಗುತ್ತಿದೆ.

G20 leaders start arriving in Delhi for G20 summit
ಜಿ-20 ಶೃಂಗಸಭೆಗಾಗಿ ಜಾಗತಿಕ ನಾಯಕರ ಆಗಮನ: ಇಟಲಿ ಪ್ರಧಾನಿಯನ್ನು ಸ್ವಾಗತಿಸಿದ ಸಚಿವೆ ಶೋಭಾ ಕರಂದ್ಲಾಜೆ

By PTI

Published : Sep 8, 2023, 1:54 PM IST

ನವದೆಹಲಿ: ಮಹತ್ವದ ಜಿ20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ಶೃಂಗಕ್ಕೆ ಜಾಗತಿಕ ಮಟ್ಟದ ನಾಯಕರು ಆಗಮಿಸಲು ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟಿನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಮತ್ತು ಐಎಂಎಫ್​ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಸೇರಿ ಉನ್ನತ ಜಿ20 ಗುಂಪಿನ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ.

ಪ್ರಸ್ತುತ ಜಿ20 ಅಧ್ಯಕ್ಷತೆ ವಹಿಸಿರುವ ಭಾರತವು ಈ ಶೃಂಗಸಭೆಯನ್ನು ಆಯೋಜಿಸಿದೆ. ಸೆಪ್ಟೆಂಬರ್ 9 ಮತ್ತು 10ರಂದು ನಡೆಯುವ ವಾರ್ಷಿಕ ಶೃಂಗಸಭೆಯಲ್ಲಿ ಜಿ20 ರಾಷ್ಟ್ರಗಳ ನಾಯಕರು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಇಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿವಿಧ ರಾಷ್ಟ್ರಗಳ ನಾಯಕರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಲಾಗುತ್ತಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬರಮಾಡಿಕೊಂಡರು. ಈ ವೇಳೆ, ಕಲಾ ತಂಡಗಳೊಂದಿಗೆ ಇಟಲಿ ಪ್ರಧಾನಿ ಫೋಟೋ ತೆಗೆಸಿಕೊಂಡರು. ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಹಾಗೂ ಮಾರಿಷಸ್ ಪ್ರಧಾನಿ ಪ್ರವೀಂದ್​ ಕುಮಾರ್ ಜುಗ್ನಾಥ್ ಕೂಡ ದೆಹಲಿಗೆ ಆಗಮಿಸಿದರು. ಮತ್ತೊಂದೆಡೆ, ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರು ಮಾರಿಷಸ್ ಪ್ರಧಾನಿ ಜುಗ್ನಾಥ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು.

ಇದನ್ನೂ ಓದಿ:G20 Summit: ದೆಹಲಿಗೆ ಅಭೂತಪೂರ್ವ ಪೊಲೀಸ್‌ ಭದ್ರತೆ; ವಾಹನ ಸಂಚಾರಕ್ಕೆ ನಿರ್ಬಂಧ

ಭಾರತದತ್ತ ಜೋ ಬೈಡನ್ ಪ್ರಯಣ:ಜಿ20 ಶೃಂಗಸಭೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅಮೆರಿಕದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಸಮಯದ ಪ್ರಕಾರ ಗುರುವಾರ ರಾತ್ರಿ ಬೈಡನ್​ ಪ್ರಯಣ ಆರಂಭಿಸಿದ್ದು, ಇಂದು ಸಂಜೆ 7 ಗಂಟೆ ಸುಮಾರಿಗೆ ಅವರು ದೆಹಲಿಗೆ ಬಂದಿಳಿಯಲಿದ್ದಾರೆ. 2021ರ ಜನವರಿಯಲ್ಲಿ ಅಮೆರಿಕ ಅಧ್ಯಕರಾಗಿ ಅಧಿಕಾರ ವಹಿಸಿಕೊಂಡು ಬಳಿಕ ಬೈಡನ್​ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.

ತನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಭಾರತವು ಅಂತರ್ಗತ ಬೆಳವಣಿಗೆ, ಡಿಜಿಟಲ್ ನಾವೀನ್ಯತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸಮಾನವಾದ ಜಾಗತಿಕ ಆರೋಗ್ಯ ಪ್ರವೇಶದಂತಹ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ಜಿ20 ಗುಂಪಿನಲ್ಲಿದೆ.

ಇದು ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರಸರ್ಕಾರಿ ವೇದಿಕೆಯಾಗಿದೆ. ಜಾಗತಿಕ ಜಿಡಿಪಿಯ ಸುಮಾರು ಶೇ.85ರಷ್ಟು ಪಾಲು ಹೊಂದಿರುವ ರಾಷ್ಟ್ರಗಳು ಈ ಗುಂಪಿನಲ್ಲಿವೆ. ಜೊತೆಗೆ ಜಾಗತಿಕ ವ್ಯಾಪಾರದ ಶೇ.75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಜಿ20 ದೇಶಗಳು ಪ್ರತಿನಿಧಿಸುತ್ತವೆ.

ಇದನ್ನೂ ಓದಿ:G20 Summit: ಜಿ20 ಶೃಂಗಸಭೆಗೆ ದೆಹಲಿ ಹೇಗೆ ಸಜ್ಜಾಗಿದೆ ಗೊತ್ತೇ? ಫೋಟೋಗಳು

ABOUT THE AUTHOR

...view details