'ಕಾಂಗ್ರೆಸ್‌ನ ಸ್ಥಿತಿ ಮೇಘಸ್ಫೋಟದಂತಿದೆ. ಅದರ ಸೋರಿಕೆಯನ್ನು ಮುಚ್ಚುವುದು ಎಲ್ಲಿ ಎಂಬುವುದೇ ಆ ಪಕ್ಷಕ್ಕೆ ಸಮಸ್ಯೆಯಾಗಿದೆ.' ಹೀಗೆಂದು ಶಿವಸೇನೆ ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದಷ್ಟೇ ಕಳವಳ ವ್ಯಕ್ತಪಡಿಸಿತ್ತು. ಆದರೆ, ಅದೇ ಶಿವಸೇನೆಗೀಗ ರಾಜಕೀಯ ಮೇಘಸ್ಫೋಟ ಬಂದಪ್ಪಳಿಸಿದೆ. ಅದು ಅಂತಿಂಥ ಸ್ಫೋಟವಲ್ಲ, ಇಡೀ ಶಿವಸೇನೆಯೇ ನೆಲಕಚ್ಚುವಂತೆ ಭೀಕರ ಸ್ಫೋಟ.
ಈ ಹಿಂದೆ ಕಾಂಗ್ರೆಸ್ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್ ಹಾಗೂ ಇತ್ತೀಚಿಗೆ ಸುನೀಲ್ ಜಾಖರ್ ಮತ್ತು ಹಾರ್ದಿಕ್ ಪಟೇಲ್ ಅವರಂತಹ ನಾಯಕರು ಪಕ್ಷ ತೊರೆದ ಹಿನ್ನೆಲೆಯಲ್ಲಿ ಮೇ 21ರಂದು ಶಿವಸೇನೆಯು ಕಾಂಗ್ರೆಸ್ ಕುರಿತು ಅನುಕಂಪದ ಮಾತುಗಳನ್ನಾಡಿತ್ತು. ಅನೇಕ ನಾಯಕರು ಪಕ್ಷ ತೊರೆಯುತ್ತಿದ್ದಾರೆ ಮತ್ತು ಯುವ ನಾಯಕರು ಹೇಗೆ ಹಳೆಯ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತ್ತು.
ವಿಪರ್ಯಾಸವೆಂದರೆ, ಸರಿಯಾಗಿ ಒಂದೇ ತಿಂಗಳಿಗೆ (ಜೂನ್ 21) ಶಾಸಕರ ದಂಗೆಯ ರೂಪದಲ್ಲಿ ಶಿವಸೇನೆಗೆ ಚಂಡಮಾರುತವೇ ಅಪ್ಪಳಿಸಿತು. ಅಷ್ಟೇ ಏಕೆ?, ಈ ದಂಗೆ ಶಿವಸೇನೆ ನೇತೃತ್ವದ 30 ತಿಂಗಳ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು ಬೇರುಸಹಿತ ಕಿತ್ತೊಗೆಯುವುದಾಗಿ ಬೆದರಿಕೆವೊಡ್ಡಿದೆ. ಆದರೆ, ತಮ್ಮದೇ ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಏಕನಾಥ್ ಶಿಂದೆ ನೇತೃತ್ವದ ಬಂಡಾಯದ ಗುಂಪು ತಮ್ಮದೇ ಆದ ಸಣ್ಣ ರಾಜಕೀಯ ಪ್ರವಾಹವನ್ನು ಸೃಷ್ಟಿಸುವಲ್ಲಿ ನಿರತವಾಗಿತ್ತು ಅನ್ನೋದು ಆ ಸಂದರ್ಭದಲ್ಲಿ ಶಿವಸೇನೆಗೇಕೆ ತಿಳಿಯಲಿಲ್ಲ?
ಮೈ ಮರೆತ 'ಸೇನೆ': ಮೇಲ್ನೋಟಕ್ಕೆ ಶಿವಸೇನೆ, ತನ್ನ ಪಕ್ಷದಲ್ಲೇ ವಿವಿಧ ಹಂತಗಳಲ್ಲಿ ವ್ಯಕ್ತವಾಗುತ್ತಿದ್ದ ಒಳಬೇಗುದಿ, ಅಸಹಾಯಕತೆ ಹಾಗೂ ತನ್ನ ಮೂಗಿನ ನೇರಕ್ಕೆ ನಡೆಯುತ್ತಿದ್ದ ಬಂಡಾಯದ ಸೂಚನೆಗಳನ್ನು ಪತ್ತೆ ಹಚ್ಚಲು ಹೇಗೆ ವಿಫಲವಾಯಿತು?. ಅಂತಿಮವಾಗಿ ಸ್ಫೋಟವಾದ ಬಳಿಕವೂ ಆ ಬಂಡಾಯವನ್ನೇಕೆ ಮುಚ್ಚಲು ಸಾಧ್ಯವಾಗಲಿಲ್ಲ? ಎನ್ನುವುದಕ್ಕೆ ಉತ್ತರವಿಲ್ಲ.