ಮುಂಬೈ (ಮಹಾರಾಷ್ಟ್ರ):ಖ್ಯಾತ ಉದ್ಯಮಿ ಗೌತಮ್ ಅದಾನಿ ಸಮೂಹದ ಷೇರುಗಳು ಭಾರಿ ಕುಸಿತಕಂಡು ತಲ್ಲಣ ಸೃಷ್ಟಿಸಿದ್ದು, ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕ್ರಿಯೆ ನೀಡಿದ್ದಾರೆ. ಅದಾನಿ ಷೇರುಗಳು ಕುಸಿತ ಮತ್ತು ಎಫ್‌ಪಿಒ ಷೇರು ಮಾರಾಟ ರದ್ದು ಮಾಡಿರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾನಿ ಎಫ್‌ಪಿಒ (FPO - Follow-On Public Offering) ಹಿಂತೆಗೆದುಕೊಳ್ಳುವಿಕೆ ಮತ್ತು ಅದಾನಿ ಸಮೂಹದ ಪ್ರಸ್ತುತ ಪರಿಸ್ಥಿತಿಯಿಂದ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ದೃಷ್ಟಿಯಲ್ಲಿ ಯೋಚಿಸಬೇಡಿ. ಕಳೆದ ಎರಡು ದಿನಗಳಲ್ಲಿ ವಿದೇಶಿ ವಿನಿಮಯ ಮೀಸಲು ಎಂಟು ಬಿಲಿಯನ್ ಡಾಲರ್ ಹೆಚ್ಚಾಗಿದೆ. ನಮ್ಮ ಸ್ಥೂಲ ಆರ್ಥಿಕ ಮೂಲ ಅಂಶಗಳು ಅಥವಾ ಆರ್ಥಿಕತೆಯ ಮೇಲೆ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ಷೇರುಗಳ ಏರಿಳಿತ, ಅದಾನಿ ಎಫ್‌ಪಿಒ ರದ್ದು: ಹೂಡಿಕೆದಾರರಿಗೆ ₹20 ಸಾವಿರ ಕೋಟಿ ವಾಪಸ್
ಎಫ್‌ಪಿಒಗಳು ಬರುತ್ತವೆ, ಹೋಗುತ್ತವೆ. ಇಂತಹ ಏರಿಳಿತಗಳು ಪ್ರತಿ ಮಾರುಕಟ್ಟೆಯಲ್ಲೂ ಇವೆ. ಆದರೆ, ನಮಗೆ ಎಂಟು ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಬಂದಿದೆ ಎಂಬ ಅಂಶವು ಭಾರತದ ಬಗೆಗಿನ ಗ್ರಹಿಕೆ ಮತ್ತು ಅದರ ಅಂತರ್ಗತ ಶಕ್ತಿ ಅಖಂಡವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ದೇಶದಲ್ಲಿ ಎಫ್‌ಪಿಒ ಎಷ್ಟು ಬಾರಿ ಹಿಂಪಡೆದಿಲ್ಲ?, ಅದರಿಂದ ಭಾರತವು ಎಷ್ಟು ಬಾರಿ ಬಳಲಿದೆ?, ಎಫ್‌ಪಿಒಗಳು ಎಷ್ಟು ಬಾರಿ ಮರಳಿ ಬಂದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.