ಬೊಕಾರೋ (ಜಾರ್ಖಂಡ್): ಮೊಹರಂ ಹಬ್ಬದ ನಿಮಿತ್ತ ಶೋಕ ಮೆರವಣಿಗೆ ತೆರಳುತ್ತಿದ್ದ ಜನರಿಗೆ ವಿದ್ಯುತ್ ತಂತಿ ತಗುಲಿ ನಾಲ್ವರು ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಬೊಕಾರೋದಲ್ಲಿ ನಡೆದಿದೆ. ಗಾಯಾಳುಗಳನ್ನು ಇಲ್ಲಿನ ಡಿವಿಸಿ ಬೊಕಾರೋ ಥರ್ಮಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೊಹರಂ ಹಬ್ಬದ ಹಿನ್ನೆಲೆ ಶಿಯಾ ಸಮುದಾಯದವರು ಇಲ್ಲಿನ ಖೆಟ್ಕೊ ಎಂಬಲ್ಲಿ ಶೋಕ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಸುಮಾರು 11000 ವೋಲ್ಟ್ ತಂತಿಯು ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ತಗುಲಿದೆ. ಇದರಿಂದಾಗಿ ಹತ್ತು ಮಂದಿಗೆ ವಿದ್ಯುತ್ ಶಾಕ್ ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಹೆಚ್ಚಿನ ವಿದ್ಯುತ್ ಸರಬರಾಜಿಗೆ ಇರಿಸಲಾಗಿದ್ದ ಬ್ಯಾಟರಿ ಕೂಡ ಸ್ಫೋಟಗೊಂಡಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶೋಕ ಮೆರವಣಿಗೆಯನ್ನು ಇಸ್ಲಾಮಿಕ್ ಕ್ಯಾಲೆಂಡರ್ನ ಮೊದಲ ತಿಂಗಳಾದ ಮೊಹರಂನ 10ನೇ ದಿನ ಆಚರಿಸಲಾಗುತ್ತದೆ. ಶಿಯಾ ಸಮುದಾಯದವರು ಇಂದು ಶೋಕ ಮೆರವಣಿಗೆ ನಡೆಸುತ್ತಾರೆ.
ವಿದ್ಯುತ್ ಶಾಕ್ ತಗುಲಿ ಯುವಕ ಸಾವು: ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿತ್ತು. ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಎಂಬ ಯುವಕ ಮೃತಪಟ್ಟಿದ್ದ.
ಮುಂಜಾನೆ ಮನೆಯಲ್ಲಿ ಮೊಬೈಲ್ ಚಾರ್ಜ್ ಹಾಕಲು ಯುವಕ ಮುಂದಾಗಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಜಿಮ್ನಲ್ಲಿ ವಿದ್ಯುತ್ ತಗುಲಿ ಯುವಕ ಸಾವು :ಜಿಮ್ನಲ್ಲಿನ ಟ್ರೆಡ್ಮಿಲ್ ಮೇಲೆ ರನ್ನಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಹರಿದ ಪರಿಣಾಮ ಯುವಕ ಸಾವನಪ್ಪಿದ್ದ ಘಟನೆ ನವದೆಹಲಿಯಲ್ಲಿ ನಡೆದಿತ್ತು. ದೆಹಲಿಯ ರೋಹಿಣಿ ಪ್ರದೇಶದ ಸಕ್ಷಮ್ ಸಾವನ್ನಪ್ಪಿದ ಯುವಕ. ಎಂದಿನಂತೆ ಬೆಳಗ್ಗೆ ರೋಹಿಣಿ ಪ್ರದೇಶದಲ್ಲಿರುವ ಜಿಮ್ಗೆ ಬಂದಿದ್ದ ಸಕ್ಷಮ್, ಟ್ರೆಡ್ಮಿಲ್ನಲ್ಲಿ ರನ್ನಿಂಗ್ ಮಾಡುತ್ತಿದ್ದ. ಈ ಸಂದರ್ಭ ವಿದ್ಯುತ್ ಪ್ರವಹಿಸಿ ಸಕ್ಷಮ್ ಅಲ್ಲೇ ಕುಸಿದು ಬಿದ್ದಿದ್ದ. ತಕ್ಕಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಹಂತದಲ್ಲಿ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದರು.
ಇದನ್ನೂ ಓದಿ :ಎರಡು ಬಸ್ಗಳ ನಡುವೆ ಭೀಕರ ಅಪಘಾತ.. 6 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ