ನವದೆಹಲಿ :ಉತ್ತರಪ್ರದೇಶ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ವಿವಿಧ ಪಕ್ಷದ ಮುಖಂಡರ ಪಕ್ಷಾಂತರ ಪರ್ವ ಕೂಡ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಗೆ ಶಾಕ್ ನೀಡಿ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಅನೇಕ ಬಿಜೆಪಿ ಶಾಸಕರು ಸಮಾಜವಾದಿ ಪಕ್ಷ ಸೇರಿಕೊಂಡಿದ್ದರು. ಇದೀಗ, ಕಾಂಗ್ರೆಸ್ಗೆ ಕೈಕೊಟ್ಟಿರುವ ಕೇಂದ್ರದ ಮಾಜಿಸಚಿವ ಆರ್ಪಿಎನ್ ಸಿಂಗ್ ಇಂದು ದಿಢೀರ್ ಆಗಿ ಬಿಜೆಪಿ ಸೇರಿದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷ ಆರ್ಪಿಎನ್ ಸಿಂಗ್ ಅವರನ್ನ ಉತ್ತರಪ್ರದೇಶ ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ನೇಮಕ ಮಾಡಿತ್ತು. ಇದರ ಬೆನ್ನಲ್ಲೇ ಕೈ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿಕೊಂಡಿದ್ದಾರೆ. ಈ ಮೂಲಕ ಕಳೆದ 32 ವರ್ಷಗಳ ಕಾಲ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನ ಕಡಿದುಕೊಂಡಿದ್ದಾರೆ.
ಆರ್ಪಿಎನ್ ಸಿಂಗ್ ಅವರಿಗೆ ಪಕ್ಷದ ಬಾವುಟ ನೀಡಿ ಧರ್ಮೇಂದ್ರ ಪ್ರಧಾನ್ ಬರಮಾಡಿಕೊಂಡರು. ಇವರ ಜೊತೆಗೆ ಉತ್ತರಪ್ರದೇಶ ಕಾಂಗ್ರೆಸ್ ವಕ್ತಾರ ಶಶಿ ವಾಲಿ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ರಾಜೇಂದ್ರ ಆಹ್ವಾನ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ, ಅನುರಾಗ್ ಠಾಕೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪಕ್ಷ ಸೇರಿದ ಬಳಿಕ ಮಾತನಾಡಿರುವ ಆರ್ಪಿಎನ್ ಸಿಂಗ್, ಕಳೆದ 32 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಈ ಹಿಂದೆ ಇರುವ ಸ್ಥಿತಿಯಲ್ಲೇ ಈಗಲೂ ಇದೆ. ದೇಶದ ಅಭಿವೃದ್ಧಿ ಹಿತಾಸಕ್ತಿಯಿಂದ ನಾನು ಬಿಜೆಪಿ ಸೇರುತ್ತಿರುವೆ. ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.