ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಗೆ ರಾಜೀನಾಮೆ ನೀಡಿದ ನಾಲ್ಕೇ ದಿನಗಳಲ್ಲಿ ಮಾಜಿ ಸಂಸದ ಬಿ. ನರಸಯ್ಯ ಗೌಡ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಸೇರ್ಪಡೆಗೊಂಡ ನರಸಯ್ಯ ಗೌಡ ಅವರನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ, ತೆಲಂಗಾಣ ಉಸ್ತುವಾರಿ ತರುಣ್ ಚುಗ್ ಪಕ್ಷಕ್ಕೆ ಸ್ವಾಗತಿಸಿದರು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಉಪಸ್ಥಿತರಿದ್ದರು.
ನವೆಂಬರ್ 3ರಂದು ನಡೆಯುವ ಮುನುಗೋಡು ವಿಧಾನಸಭಾ ಉಪ ಚುನಾವಣೆಯಲ್ಲಿ ನರಸಯ್ಯ ಗೌಡ ಟಿಆರ್‌ಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕುಸುಕುಂಟ್ಲ ಪ್ರಭಾಕರ ರೆಡ್ಡಿ ಅವರಿಗೆ ಟಿಆರ್‌ಎಸ್ ಟಿಕೆಟ್ ನೀಡಲಾಗಿತ್ತು. ಅಕ್ಟೋಬರ್ 13ರಂದು ಪ್ರಭಾಕರ್ ರೆಡ್ಡಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಇದಾದ ನಂತರ ಅ.15ರಂದು ಟಿಆರ್‌ಎಸ್‌ಗೆ ನರಸಯ್ಯ ಗೌಡ ರಾಜೀನಾಮೆ ನೀಡಿದ್ದರು.
ಈಗ ನರಸಯ್ಯ ಗೌಡ ಬಿಜೆಪಿಗೆ ಸೇರ್ಪಡೆಗೊಳ್ಳುವುದರಿಂದ ಗೌಡ ಸಮುದಾಯದ ಮತಗಳನ್ನು ಸೆಳೆಯುವ ಬಿಜೆಪಿಯ ಯತ್ನಕ್ಕೆ ಪುಷ್ಠಿ ನೀಡುವಂತೆ ಆಗಿದೆ. ಗೌಡ ಅವರೊಂದಿಗೆ ಕೆಲವು ಟಿಆರ್‌ಎಸ್ ಮುಖಂಡರು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ:ಮಾಜಿ ಸಂಸದ ಬೂರ ನರಸಯ್ಯಗೌಡ ಟಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ.. ಬಿಜೆಪಿಯತ್ತ ಪಯಣ