ನವದೆಹಲಿ:ತಾಲಿಬಾನ್ ಉಗ್ರರ ಬಲೆಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಎಲ್ಲರಂತೆ ನಾವೂ ಬಹಳ ಎಚ್ಚರಿಕೆಯಿಂದ ನೋಡುತ್ತಿದ್ದು, ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಕಡೆಗೆ ನಮ್ಮ ಗಮನ ಕೇಂದ್ರೀಕರಿಸಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ನಂತರ ನ್ಯೂಯಾರ್ಕ್ನ ಸುದ್ದಿಗಾರರನ್ನುದ್ದೇಶಿಸಿ ಸಚಿವರು ಮಾತನಾಡಿದರು. ತಾಲಿಬಾನ್ ಜೊತೆ ಭಾರತ ಸಂಪರ್ಕದಲ್ಲಿದ್ದೇಯೇ? ತಾಲಿಬಾನ್ ನಾಯಕತ್ವವನ್ನು ಭಾರತವು ಹೇಗೆ ನೋಡುತ್ತದೆ ಮತ್ತು ಅದರೊಂದಿಗೆ ಹೇಗೆ ವ್ಯವಹರಿಸುತ್ತದೆ? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ನೇರ ಉತ್ತರವನ್ನ ನೀಡಲು ನಿರಾಕರಿಸಿದ ಸಚಿವ ಜೈಶಂಕರ್, "ಇದಿನ್ನೂ ಆರಂಭಿಕ ದಿನಗಳು" ಎಂದಷ್ಟೇ ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನ್-ಭಾರತದ ನಡುವಿನ ಎಲ್ಲಾ ಆಮದು-ರಫ್ತು ವ್ಯವಹಾರಕ್ಕೆ ತಾಲಿಬಾನ್ ನಿರ್ಬಂಧ
ಅಫ್ಘಾನಿಸ್ತಾನದೊಂದಿಗೆ ತನ್ನ ಹೂಡಿಕೆ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಮುಂದುವರಿಸುತ್ತದೆಯೇ ಎಂಬ ಪ್ರಶ್ನೆಗೆ, "ಅಫ್ಘಾನ್ ಜನರೊಂದಿಗಿನ ಐತಿಹಾಸಿಕ ಸಂಬಂಧ ಮುಂದುವರೆಯಲಿದೆ. ಇದು ಮುಂದಿನ ದಿನಗಳಲ್ಲಿ ನಮ್ಮ ಕ್ರಮಕ್ಕೆ ಮಾರ್ಗದರ್ಶನ ನೀಡುತ್ತದೆ. ಈಗೇನಿದ್ದರೂ ನಮ್ಮ ಗಮನ ಅಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ" ಎಂದು ಸಚಿವರು ತಿಳಿಸಿದ್ದಾರೆ. ಇತ್ತ ತಾಲಿಬಾನ್ ಮಾತ್ರ ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತಿಗೆ ನಿರ್ಬಂಧ ಹೇರಿದೆ.
ಅಫ್ಘಾನಿಸ್ತಾನದಿಂದ ಹಿಂದು ಮತ್ತು ಸಿಖ್ಖರನ್ನು ವಾಪಸ್ ಕರೆ ತರುವುದಾಗಿ ಭಾರತ ಭರವಸೆ ನೀಡಿದೆ. ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿರುವವರ ಪರವಾಗಿ ಭಾರತ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಕಾಬೂಲ್‌ನ ರಾಯಭಾರ ಕಚೇರಿಯ ಅಧಿಕಾರಿಗಳು, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಹಾಗೂ ಅಲ್ಲಿರುವ ಭಾರತೀಯ ಪ್ರಜೆಗಳನ್ನು ದೇಶಕ್ಕೆ ಮರಳಿ ತರಲಾಗಿದೆ. ಉಳಿದವರನ್ನು ಕರೆತರಲು ಪ್ರಯತ್ನಿಸುತ್ತಿದೆ.