ನವದೆಹಲಿ :ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾ.ಅಮರೀಂದರ್ ಸಿಂಗ್ ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವಜೋತ್ ಸಿಂಗ್ ಸಿಧು ಒಬ್ಬ ಅಸಮರ್ಥ ವ್ಯಕ್ತಿ. ದೇಶದ ಹಿತದೃಷ್ಟಿಯಿಂದ ಪಂಜಾಬ್‌ನ ಮುಂದಿನ ಸಿಎಂ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಹೆಸರನ್ನು ವಿರೋಧಿಸುತ್ತೇನೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ದೇಶದ ಭದ್ರತೆ ದೃಷ್ಟಿಯಿಂದ ಸಿಧು ಪಂಜಾಬ್ ಸಿಎಂ ಆಗೋಕೆ ನನ್ನ ವಿರೋಧವಿದೆ.. ಕ್ಯಾ. ಅಮರೀಂದರ್ ಸಿಂಗ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಧು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಆತನಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಸ್ನೇಹಿತ. ಸಿದ್ದುಗೆ ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಜೊತೆ ಸಂಬಂಧವಿದೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜೀನಾಮೆ ಕುರಿತು ಫೋನ್ ಕರೆ ಮಾಡಿದ್ದ ಸೋನಿಯಾ ಗಾಂಧಿ ಅವರು ನನ್ನ ಕ್ಷಮಿಸಿ ಅಮರೀಂದರ್ ಎಂದಿದ್ದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ನನ್ನ ಬೆಂಬಲಿಗರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎಂದಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನಲ್ಲಿ ನನಗೆ ಅವಮಾನವಾಗಿದೆ. ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ, ನಾನು ಇಂದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದೆ. ಇಂದು ಶಾಸಕರನ್ನು ಭೇಟಿಯಾದ ನಂತರ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದು ಅಮರೀಂದರ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪಂಜಾಬ್ ರಾಜಕೀಯ ಬಿಕ್ಕಟ್ಟು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್