ಕೊಟ್ಟಾಯಂ, ಕೇರಳ : ಪ್ರವಾಹದ ವೇಳೆಯಲ್ಲಿ ಎಷ್ಟೋ ಪ್ರಾಣಿಗಳಿಗೆ ಹಾನಿಯಾಗುತ್ತದೆ. ಎಷ್ಟೋ ಮನೆಗಳು ಉರುಳಿ ಬಿದ್ದು, ಆಸ್ತಿ ಪಾಸ್ತಿ ನಷ್ಟವಾಗುತ್ತದೆ. ಆದರೆ, ಕೇರಳದ ಕೊಟ್ಟಾಯಂನಲ್ಲಿರುವ ಮನೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಮನೆ ಪ್ರವಾಹದಲ್ಲಿ ಬೀಳುವುದೂ ಇಲ್ಲ, ಮುಳುಗುವುದೂ ಇಲ್ಲ. ಕೊಚ್ಚಿ ಹೋಗುವುದೂ ಇಲ್ಲ.
ಪ್ರವಾಹ ಬಂದು ನೀರಿನ ಮಟ್ಟ ಹೆಚ್ಚಾದರೆ, ಸುಮಾರು 10 ಅಡಿಗಳಷ್ಟು ಮೇಲಕ್ಕೆ ಈ ಮನೆಯನ್ನು ಎತ್ತಬಹುದು. ಮನೆ ಮಾತ್ರವಲ್ಲ ಕಾರು ಪಾರ್ಕಿಂಗ್ ಮತ್ತು ಸೆಫ್ಟಿಕ್ ಟ್ಯಾಂಕ್ಗಳನ್ನೂ ಸುರಕ್ಷಿತವಾಗಿ ತೇಲಿಸಬಹುದು. ಅಂದಹಾಗೆ ಈ ಮನೆಯ ವಿನ್ಯಾಸಕಾರರು ಗೋಪಾಲ್ಕೃಷ್ಣನ್ ಆಚಾರಿ (Gopalakrishnan Achari) ಎಂಬುವರು. ಮನೆ ಇರುವುದು ವಾಜಪಲ್ಲಿಯ ಚೆಂಗನಾಸೆರ್ರಿಯಲ್ಲಿ.
ಕೇರಳದಲ್ಲಿ ನಿರ್ಮಾಣವಾಗಿರುವ ಮನೆ 2018ರಲ್ಲಿ ಕೇರಳದಲ್ಲಿ ಭಾರಿ ಪ್ರವಾಹ (Kerala Flood) ಉಂಟಾಗಿತ್ತು. ಈ ಪ್ರವಾಹ ಭೀಕರತೆಯನ್ನ ಅರಿತ ಗೋಪಾಲಕೃಷ್ಣನ್ ಆಚಾರಿ ಈ ಮನೆಯನ್ನು ನಿರ್ಮಾಣ ಮಾಡಲು ಮುಂದಾದರು. ಅನೇಕ ವ್ಯಕ್ತಿಗಳನ್ನು ಸಹಾಯ ಮಾಡುವಂತೆ ಕೋರಿದರಾದರೂ, ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ನಂತರ ಅವರೇ ಬಂಡವಾಳ ಹೂಡಿ, 1200 ಚದರ ಅಡಿಯಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ.
ಇಟ್ಟಿಗೆ, ಸಿಮೆಂಟ್ ಇಲ್ಲ:ಮನೆಯನ್ನು ನಾಲ್ಕು ಪಿಸ್ಟನ್ಗಳ ಮೇಲೆ ನಿರ್ಮಾಣ ಮಾಡಲಾಗಿದೆ. ಇಟ್ಟಿಗೆ, ಸಿಮೆಂಟ್ ಇಲ್ಲದೇ ನಿರ್ಮಾಣ ಮಾಡಿದ್ದರೂ ಒಂದು ಮನೆಗೆ ಬೇಕಾಗಿರುವ ಎಲ್ಲಾ ಅಗತ್ಯಗಳನ್ನು ಈ ಮನೆ ಹೊಂದಿದೆ. ಈ ಪಿಸ್ಟನ್ಗಳು ನಿರ್ಮಾಣವಾಗಿರುವುದು ನಾಲ್ಕೂ ಮೂಲೆಗಳಲ್ಲಿ ಇರುವ ಟ್ಯಾಂಕ್ಗಳಲ್ಲಿ.. ಈ ಪಿಸ್ಟನ್ಗಳ ಆಧಾರದಲ್ಲಿಯೇ ಮನೆಯನ್ನು ಮೇಲಕ್ಕೆ ಎತ್ತಲಾಗುತ್ತದೆ.
ಗ್ವಾಲ್ವನೀಕರಣಕ್ಕೆ ಒಳಪಡಿಸಿದ ಕಬ್ಬಿಣದ ಪೈಪ್ಗಳನ್ನು (galvanized Iron pipes) ಅಡಿಪಾಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಮನೆ ಪೂರ್ತಿ ನಿರ್ಮಾಣವಾಗಿರುವುದು ಗ್ವಾಲ್ವನೀಕರಣಕ್ಕೆ ಒಳಪಡಿಸಿದ ಕಬ್ಬಿಣದ ಪೈಪ್ ಮತ್ತು ಮಲ್ಟಿವುಡ್‌ನಿಂದ ಮಾತ್ರ.. ಟಿನ್ ಶೀಟ್ಗಳನ್ನ ಛಾವಣಿಗೆ ಬಳಸಲಾಗಿದೆ. ಗಮ್ ಅಂಟಿಸಿದ ಟೈಲ್ಸ್‌ಗಳನ್ನು ನೆಲಕ್ಕೆ ಅಂಟಿಸಲಾಗಿದೆ. ಈ ಮನೆಯಲ್ಲಿ ಒಂದು ದೊಡ್ಡ ಹಾಲ್, ಎರಡು ಬೆಡ್ ರೂಮ್, ಅಡುಗೆ ಮನೆ, ಸ್ನಾನದ ಮನೆಯನ್ನು ಹೊಂದಿದೆ.
ಈಗ ಒಂದು ಅಂತಸ್ತು ಮಾತ್ರ ಇದ್ದು, ಮತ್ತೊಂದು ಅಂತಸ್ತು ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಮನೆಯ ನಿರ್ಮಾಣದ ತಂತ್ರಜ್ಞಾನವನ್ನು ತಿಳಿದುಕೊಳ್ಳಲು ಜನರು, ವಿದ್ಯಾರ್ಥಿಗಳು ಧಾವಿಸುತ್ತಿದ್ದಾರೆ. ಸರ್ಕಾರ ಮತ್ತು ಸಂಸ್ಥೆಗಳು ಸಹಕಾರ ನೀಡಿದರೆ ಕಡಿಮೆ ವೆಚ್ಚದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಂತಹ ಮನೆಗಳ ನಿರ್ಮಾಣ ಮಾಡಬಹುದು ಎಂದು ಗೋಪಾಲಕೃಷ್ಣನ್ ಅವರ ಅಭಿಮತ..
ಇದನ್ನೂ ಓದಿ:Kurup Movie: ಕ್ರಿಮಿನಲ್ಗಳಲ್ಲೇ ಕ್ರಿಮಿನಲ್ನ ಸ್ಟೋರಿ ಇದು: ಚಿತ್ರದ ಕತೆಯ ಹಿಂದಿನ ಕತೆಯೇ ರೋಚಕ!