ನವದೆಹಲಿ:ಉತ್ತರ ಭಾರತದಲ್ಲಿ ಚಳಿ ಮತ್ತು ಮಂಜಿನ ಆಟ ಮುಂದುವರಿದಿದ್ದು, ಜನಜೀವನ ಪರದಾಡುವಂತಾಗಿದೆ. ಬುಧವಾರ ಬೆಳಗ್ಗೆ ದೆಹಲಿ, ಪಂಜಾಬ್ನಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, 110 ದೇಶಿ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬವಾಗಿದೆ. ರೈಲು, ವಾಹನ ಸಂಚಾರಕ್ಕೂ ಮಂಜು ಅಡ್ಡಿಯಾಗಿದೆ. ಇತ್ತ ಕಾಶ್ಮೀರದಲ್ಲಿ ತಾಪಮಾನ ತೀವ್ರ ಕುಸಿದಿದ್ದು, ಶೇಕಡಾ -2 ಕ್ಕೆ ತಲುಪಿದೆ.
ಬೆಳಗಿನ ಜಾವ 7 ಗಂಟೆ ಹೊತ್ತಿನಲ್ಲೂ ಮಂಜು ದಟ್ಟವಾಗಿ ಹರಡಿಕೊಂಡು ಎದುರಿನಲ್ಲಿ ಏನೊಂದೂ ಗೋಚರಿಸದ ಸ್ಥಿತಿ ಇತ್ತು. ಇದರಿಂದಾಗಿ ವಾಯು, ರಸ್ತೆ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ಕ್ರಮೇಣ ಮಂಜು ಕರಗುತ್ತದೆ. ಮಧ್ಯಾಹ್ನದ ವೇಳೆಗೆ ವಾತಾವರಣ ಸ್ಪಷ್ಟವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಮಾನ, ರೈಲುಗಳ ಸಂಚಾರ ವ್ಯತ್ಯಯ:ದಟ್ಟವಾದ ಮಂಜಿನಿಂದಾಗಿ 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನಿರ್ಗಮನ ಮತ್ತು ಆಗಮನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ವಿಮಾನಗಳು ಕೂಡ ದಟ್ಟ ಮಂಜಿನಿಂದಾಗಿ ಹಾರಾಟ ನಡೆಸಲಾಗುತ್ತಿಲ್ಲ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಬೋರ್ಡ್ನಲ್ಲಿ 110 ವಿಮಾನಗಳು ತಡವಾಗಿ ಹೊರಡಲಿವೆ ಎಂದು ಡಿಸ್ಪ್ಲೇಯಲ್ಲಿ ಸೂಚಿಸುತ್ತಿತ್ತು. ಅನೇಕ ವಿಮಾನಗಳು ವಿಳಂಬವಾದರೆ, ಕೆಲವು ಬಹುಶಃ ರದ್ದಾಗುವ ಸ್ಥಿತಿ ಇದೆ.
8 ಗಂಟೆಗೆ 40 ಕ್ಕೂ ಹೆಚ್ಚು ವಿಮಾನಗಳು ದಟ್ಟವಾದ ಮಂಜಿನಿಂದಾಗಿ ಹಾರಾಟ ವಿಳಂಬ ಕಂಡಿವೆ. ಇದರಲ್ಲಿ 8 ಅಂತಾರಾಷ್ಟ್ರೀಯ ನಿರ್ಗಮನಗಳು, 4 ಅಂತಾರಾಷ್ಟ್ರೀಯ ಆಗಮನಗಳು, 22 ದೇಶೀಯ ನಿರ್ಗಮನಗಳು ಮತ್ತು 5 ದೇಶೀಯ ಆಗಮನ ವಿಮಾನಗಳಿಗೆ ಅಡಚಣೆ ಉಂಟಾಗಿತ್ತು.
ಪ್ರತಿಕೂಲ ವಾತಾವರಣದಿಂದಾಗಿ ವಿಮಾನಗಳ ಹಾರಾಟದಲ್ಲಿ ವಿಳಂಬವಾಗುತ್ತಿದೆ. ಪ್ರಯಾಣಿಕರು ಸಂಬಂಧಿಸಿದ ವಿಮಾನ ಸಂಸ್ಥೆಗಳಿಂದ ಮುಂದಿನ ಸೂಚನೆಗಳ ಮಾಹಿತಿ ಪಡೆದುಕೊಳ್ಳಿ. ಅನಾನುಕೂಲತೆ ಉಂಟಾಗಿದ್ದಕ್ಕೆ ವಿಷಾದಿಸುತ್ತೇವೆ ಎಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಉದ್ಘೋಷ ಹೊರಡಿಸಲಾಗುತ್ತಿದೆ.
ಸುಧಾರಿಸದ ದೆಹಲಿ ಗಾಳಿ ಗುಣಮಟ್ಟ:ತೀವ್ರ ಮಂಜಿನಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟವು 'ತೀವ್ರ ಕಳಪೆ' ವಿಭಾಗದಲ್ಲೇ ಉಳಿದಿದೆ. ಗಾಳಿಯ ಗುಣಮಟ್ಟ ಮಾಪಕದ 500 ರಷ್ಟಿದೆ. ಆನಂದ್ ವಿಹಾರ್ ಪ್ರದೇಶ 'ತೀವ್ರ ಕಳಪೆ' ಮಿತಿ ದಾಟಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಕೂಡ 437 ಎಕ್ಯೂಐ ಹೊಂದುವ ಮೂಲಕ ತೀವ್ರ ಕಳಪೆ ವರ್ಗ ಸೇರಿದೆ. ನಿರಂತರ ಮಂಜಿನಿಂದಾಗಿ ಗೋಚರತೆ ಕಡಿಮೆ ಇರುವ ಕಾರಣ ಪ್ರಯಾಣಿಕರು ಬೆಳಗಿನ ಸಮಯದಲ್ಲಿ ಜಾಗರೂಕರಾಗಿರಿ ಮತ್ತು ವೇಳಾಪಟ್ಟಿಗಳ ನವೀಕರಿಸಿ, ಅದಕ್ಕೆ ಅನುಗುಣವಾಗಿ ಪ್ರಯಾಣ ಬೆಳೆಸಲು ಸೂಚಿಸಲಾಗುತ್ತಿದೆ.
ಚಳಿಗೆ ಥರಗುಟ್ಟಿದ ಶ್ರೀನಗರ:ಜಮ್ಮ ಮತ್ತು ಕಾಶ್ಮೀರದಲ್ಲಿ ತೀವ್ರವಾದ ಶೀತ ಅಲೆ ಮುಂದುವರಿದಿದೆ. ಶ್ರೀನಗರವು ಕನಿಷ್ಠ ತಾಪಮಾನ ದಾಖಲಿಸಿದೆ. ನಿನ್ನೆ ರಾತ್ರಿ ಅಲ್ಲಿ ಮೈನಸ್ 2.6 ತಾಪಮಾನ ಇತ್ತು. ಶ್ರೀನಗರ ಮತ್ತು ಕಣಿವೆಯ ಇತರ ಸ್ಥಳಗಳಲ್ಲಿನ ಹೆಚ್ಚಿನ ಜಲಮೂಲಗಳು ಭಾಗಶಃ ಹೆಪ್ಪುಗಟ್ಟಿವೆ. ಗುಲ್ಮಾರ್ಗ್ ಮತ್ತು ಪಹಲ್ಗಾಮ್ನಲ್ಲಿ ಕ್ರಮವಾಗಿ ಮೈನಸ್ 2.8 ಮತ್ತು ಮೈನಸ್ 4.6 ದಾಖಲಾಗಿದೆ ಎಂದು ಹವಾಮಾನ (MeT) ಕಚೇರಿ ತಿಳಿಸಿದೆ.
ಲಡಾಖ್ ಪ್ರದೇಶದ ಲೇಹ್ ಪಟ್ಟಣದಲ್ಲಿ ಮೈನಸ್ 12.1 ಮತ್ತು ಕಾರ್ಗಿಲ್ ಮೈನಸ್ 9.2 ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ಜಮ್ಮು ನಗರದಲ್ಲಿ 7.6, ಕತ್ರಾ 7.2, ಬಟೋಟ್ 4.7, ಭದೇರ್ವಾ 1.8 ಮತ್ತು ಬನಿಹಾಲ್ 1.2 ರಾತ್ರಿಯ ಅತ್ಯಂತ ಕಡಿಮೆ ತಾಪಮಾನವನ್ನು ಹೊಂದಿದ್ದವು.
ಇದನ್ನೂ ಓದಿ:ಮಂಜಿನ ಹೊದಿಕೆಯಾದ ಉತ್ತರ ಭಾರತ: ಕೊರೆಯುವ ಚಳಿಗೆ ಹೆಪ್ಪುಗಟ್ಟಿದ ದಾಲ್ ಸರೋವರ