ಶ್ರೀನಗರ:ಕಳೆದ ರಾತ್ರಿಯಿಂದ ಉಂಟಾಗಿರುವ ಪ್ರತಿಕೂಲ ಹವಾಮಾನ ಮತ್ತು ಮಳೆಯ ಕಾರಣ ಸ್ಥಳೀಯ ಆಡಳಿತವು ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಮೊಟಕುಗೊಳಿಸಿದೆ. ಯಾತ್ರಾರ್ಥಿಗಳಿಗೆ ಮುಂದಿನ ಆದೇಶದವರೆಗೆ ಮೂಲ ಶಿಬಿರಗಳಲ್ಲಿಯೇ ತಂಗುವಂತೆ ಸೂಚನೆ ನೀಡಲಾಗಿದೆ.
ಅಮರನಾಥ ದೇಗುಲ ಮಂಡಳಿಯಿಂದ ಬಂದಿರುವ ಮಾಹಿತಿ ಪ್ರಕಾರ, ಬಲ್ಟಾಲ್ ಮತ್ತು ಪಹಲ್ಗಾಮ್ ರಸ್ತೆಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಮಳೆಗಾಲದಲ್ಲಿ ಆಗಾಗ್ಗೆ ಇಲ್ಲಿ ಭೂಕುಸಿತ ಸಂಭವಿಸುವ ಅಪಾಯವಿದೆ. ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸದ್ಯಕ್ಕೆ ಎರಡೂ ಮಾರ್ಗಗಳಲ್ಲಿ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ:ಮೇಘ ಸ್ಫೋಟದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ; ಫೋಟೋಗಳಲ್ಲಿ ನೋಡಿ
ಯಾತ್ರಾರ್ಥಿಗಳಿಗೆ ದಾರಿಯುದ್ದಕ್ಕೂ ಸ್ಥಾಪಿಸಲಾದ ಶಿಬಿರಗಳಲ್ಲಿ ತಂಗಲು ತಿಳಿಸಲಾಗಿದೆ. ಹವಾಮಾನ ಸುಧಾರಿಸಿದ ನಂತರವೇ ಯಾತ್ರೆಗೆ ಅನುಮತಿ ನೀಡಲಾಗುವುದು ಎಂದು ಶಿಬಿರದ ವ್ಯವಸ್ಥಾಪಕರು ಹೇಳಿದ್ದಾರೆ. ಸದ್ಯ ಯಾತ್ರೆ ನಿಂತಿರುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲೆಲ್ಲಿ ಭಕ್ತರನ್ನು ನಿಲ್ಲಿಸಲಾಗಿದೆಯೋ ಅಲ್ಲೆಲ್ಲ ವಾಸ್ತವ್ಯ ಮತ್ತು ಊಟದ ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜೂನ್ 30 ರಿಂದ ಪ್ರಾರಂಭವಾದ ಅಮರನಾಥ ಯಾತ್ರೆಯಲ್ಲಿ ಇಲ್ಲಿಯವರೆಗೆ ಸುಮಾರು 1.5 ಲಕ್ಷ ಭಕ್ತರು ಪವಿತ್ರ ಗುಹೆಯಲ್ಲಿರುವ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಇತ್ತೀಚೆಗೆ ಮೇಘಸ್ಫೋಟದಿಂದ ಅಪಾರ ಪ್ರಮಾಣದ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟವಾಗಿದ್ದರೂ ಭಕ್ತರ ಉತ್ಸಾಹ ಕಡಿಮೆಯಾಗಿಲ್ಲ.
ಅಮರನಾಥರ ವಾರ್ಷಿಕ ತೀರ್ಥಯಾತ್ರೆಯು ಜೂನ್ 30 ರಿಂದ ಪ್ರಾರಂಭವಾಗಿದೆ. ರಕ್ಷಾ ಬಂಧನದ ದಿನವೂ ಆಗಿರುವ ಆಗಸ್ಟ್ 11ರಂದು ಕೊನೆಗೊಳ್ಳಲಿದೆ. ಯಾತ್ರೆಯ ಮೊದಲ ತಂಡ ಜೂನ್ 29 ರಂದು ಜಮ್ಮುವಿನಿಂದ ಹೊರಟಿತ್ತು.