ನವದೆಹಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ಲೋಪ ಪ್ರಕರಣ ಸಂಬಂಧ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಕಾಂಗ್ರೆಸ್ ಐವರು ಸೇರಿ 14 ಸಂಸದರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಸಂಸದರ ಬಗ್ಗೆ ಸ್ಪೀಕರ್ ಹೆಸರಿಸಿದ ನಂತರ ಈ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಯಿತು.
ಸಂಸದರಾದ ಟಿ.ಎನ್.ಪ್ರತಾಪನ್, ಹಿಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್, ಬೆನ್ನಿ ಬೆಹನನ್, ವಿಕೆ ಶ್ರೀಕಂದನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನಿಮೊಳಿ ಕರುಣಾನಿಧಿ, ಕೆ ಸುಬ್ರಹ್ಮಣ್ಯಂ, ಎಸ್‌ಆರ್ ಪಾರ್ಥಿಬನ್, ಎಸ್ ವೆಂಕಟೇಶನ್ ಮತ್ತು ಮಾಣಿಕಂ ಟ್ಯಾಗೋರ್ ಅವರನ್ನು ಅಧಿವೇಶನದ ಉಳಿದ ಅವಧಿಯವರೆಗೆ ಅಮಾನತು ಮಾಡಲಾಗಿದೆ. ಗದ್ದಲದ ನಡುವೆಯೇ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರತಿಪಕ್ಷಗಳ ಸದಸ್ಯರ ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು.
ಲೋಕಸಭೆ ಕಲಾಪಕ್ಕೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ್ದ ಕುರಿತಾದ ಭದ್ರತಾ ಲೋಪ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳು ಕೂಗಿದರು. ಘಟನೆ ಕುರಿತು ಸರ್ಕಾರ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ, ಗದ್ದಲದ ವಾತಾವರಣ ಉಂಟಾಯಿತು. ಇದರಿಂದ ಸದನವನ್ನು ಮುಂದೂಡಲಾಯಿತು.
ರಾಜ್ಯಸಭೆಯಿಂದ ಡೆರೆಕ್ ಒಬ್ರಿಯಾನ್ ಸಸ್ಪೆಂಡ್:ಮತ್ತೊಂದೆಡೆ, ರಾಜ್ಯಸಭೆಯಲ್ಲಿಅಶಿಸ್ತಿನ ವರ್ತನೆ ಮತ್ತು ಸಭಾಪತಿಯ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಅವರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಇದರ ನಂತರವೂ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರೆಸಿದರು.
ಸಭಾಪತಿ ಜಗದೀಪ್ ಧನ್‌ಕರ್ ಅವರು ಡೆರೆಕ್ ಒಬ್ರಿಯಾನ್ ಅವರಿಗೆ ಕಲಾಪಕ್ಕೆ ಅಡ್ಡಿಪಡಿಸುವ ಮತ್ತು ಅಶಿಸ್ತಿನ ವರ್ತನೆಯ ವಿರುದ್ಧ ಎಚ್ಚರಿಕೆ ನೀಡಿದರು. ಅಲ್ಲದೇ, ಅವರನ್ನು ಸದನದಿಂದ ಹೊರಹೋಗುವಂತೆ ಸೂಚಿಸಿದರು. ಆದರೆ, ಇದರ ಬದಲಿಗೆ ಒಬ್ರಿಯಾನ್ ಪ್ರತಿಭಟಿಸಿದರು. ನಂತರ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ನಿಯಮ 256ರ ಅಡಿ ಒಬ್ರಿಯಾನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಮಂಡಿಸಲು ಸಭಾಪತಿ ಅನುಮತಿ ನೀಡಿದರು. ಹೀಗಾಗಿ ಅಧಿವೇಶನದ ಉಳಿದ ಅವಧಿಯವರೆಗೆ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಧ್ವನಿ ಮತದೊಂದಿಗೆ ಅಂಗೀಕರಿಸಲಾಯಿತು. ಇದರಿಂದ ಪ್ರತಿಪಕ್ಷಗಳ ಸದಸ್ಯರು, ಈ ಅಮಾನತು ಸಹಿಸುವುದಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.