ಕರ್ನಾಟಕ

karnataka

By

Published : Jun 26, 2023, 10:41 AM IST

ETV Bharat / bharat

62 ವರ್ಷಗಳಲ್ಲಿ ಇದೇ ಮೊದಲು.. ಮುಂಬೈ ಮತ್ತು ದೆಹಲಿಗೆ ಒಟ್ಟಿಗೆ ಲಗ್ಗೆಯಿಟ್ಟ 'Monsoon'

Monsoon Hits Delhi-Mumbai: ಅಪರೂಪದ ಘಟನೆಯಲ್ಲಿ ದೆಹಲಿ ಮತ್ತು ಮುಂಬೈ ನಗರಗಳಿಗೆ ಮಾನ್ಸೂನ್ ಒಂದೇ ದಿನ (ಜೂ.24) ಪ್ರವೇಶಿಸಿದೆ. ಪರಿಣಾಮ ಎರಡೂ ನಗರಗಳಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆ ಸುರಿದಿದೆ.

Representative image
ಪ್ರಾತಿನಿಧಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈಗೆ ಈ ಬಾರಿ ಒಟ್ಟಿಗೆ ಮುಂಗಾರು ಪ್ರವೇಶಿಸಿದೆ. 62 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಎರಡೂ ನಗರಗಳಿಗೆ ಒಂದೇ ಬಾರಿ ಮಾನ್ಸೂನ್ ಲಗ್ಗೆಯಿಟ್ಟಿದೆ. ಉಭಯ ನಗರಗಳಲ್ಲಿ ಭಾನುವಾರ ಮಿಂಚು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದೆ.

6 ದಶಕಗಳ ಬಳಿಕ ಇದೇ ಮೊದಲು:ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಮಾನ್ಸೂನ್​ ಅಪ್ಪಳಿಸಿದರೆ, ಮುಂಬೈಗೆ ಎರಡು ವಾರ ತಡವಾಗಿ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇಂತಹ ಅಪರೂಪದ ವಿದ್ಯಮಾನ ಕೊನೆಯ ಬಾರಿಗೆ ಜೂ. 21, 1961 ರಂದು ಸಂಭವಿಸಿತು. ಇದೀಗ ಆರು ದಶಕಗಳ ಬಳಿಕ ಒಂದೇ ದಿನ ಈ ಎರಡು ನಗರಗಳಿಗೆ ಮುಂಗಾರು ಪ್ರವೇಶಿಸಿದೆ.

ಎರಡು ನಗರಗಳ ನಡುವೆ 1,430 ಕಿ. ಮೀ ಅಂತರವಿದೆ. ಸಾಮಾನ್ಯವಾಗಿ ದೆಹಲಿಗೆ ಜೂ.27ರಂದು ಪ್ರವೇಶಿಸಬೇಕಿತ್ತು. ಆದರೆ, ಈ ಬಾರಿ ಎರಡು ದಿನ ಮೊದಲೇ ಮುಂಗಾರು ಮಳೆ ಆರಂಭವಾಗಿದೆ. ಮತ್ತೊಂದೆಡೆ ಜೂ. 11ರಂದು ಮುಂಬೈಗೆ ಮುಂಗಾರು ಪ್ರವೇಶಿಸಬೇಕಿತ್ತು. ಆದರೆ, ಎರಡು ವಾರಗಳ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ "ಕಳೆದ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ 104 ಮಿ.ಮೀ ಮಳೆ ಮತ್ತು ಪೂರ್ವ ಉಪನಗರಗಳು ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 123 ಮಿ.ಮೀ ಮತ್ತು 139 ಮಿ.ಮೀ ಮಳೆಯಾಗಿದೆ. ದೆಹಲಿಯ ಸಫ್ದರ್‌ಜಂಗ್‌ನಲ್ಲಿರುವ ಪ್ರಾಥಮಿಕ ಹವಾಮಾನ ಕೇಂದ್ರದಲ್ಲಿ 48.3 ಮಿಮೀ ಮಳೆ ದಾಖಲಾಗಿದೆ. ದೆಹಲಿಯ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ನೋಯ್ಡಾ, ಗುರುಗ್ರಾಮ್, ಫರಿದಾಬಾದ್ ಮತ್ತು ಗಾಜಿಯಾಬಾದ್‌ನಲ್ಲಿಯೂ ಭಾರಿ ಮಳೆಯಾಗಿದೆ.

ಮಳೆಯ ತೀವ್ರತೆ ಕ್ರಮೇಣ ಹೆಚ್ಚಾಗುವ ಸಾಧ್ಯತೆ:ಮುಂದಿನ ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಮುಂದಿನ 5 ದಿನಗಳಲ್ಲಿ ನಿರೀಕ್ಷಿತ ತೀವ್ರ ಹವಾಮಾನದ ಸೂಚನೆ ಇದೆ ಎಂದು ಅದು ಹೇಳಿದೆ.

ಐಎಂಡಿ ಪ್ರಕಾರ 'ನೈಋತ್ಯ ಮಾನ್ಸೂನ್ ಛತ್ತೀಸ್‌ಗಢದಲ್ಲಿ ಮುಂದುವರೆದಿದೆ. ಮುಂಬರುವ ಮೂರು ದಿನಗಳವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಛತ್ತೀಸ್‌ಗಢದಲ್ಲಿ ಮಾನ್ಸೂನ್ ಆರಂಭವಾಗಿದ್ದು, ಮಧ್ಯ ಛತ್ತೀಸ್‌ಗಢದಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ರೈತರಿಗೆ ಇದು ಸಿಹಿ ಸುದ್ದಿ: ಸಹಾಯಕ ಹವಾಮಾನ ತಜ್ಞ ಸಂಜಯ ಬೈರಾಗಿ ಮಾತನಾಡಿ "ಈ ವರ್ಷದ ಮುನ್ಸೂಚನೆಯಂತೆ ಉತ್ತಮ ಮಳೆಯಾಗಲಿದೆ. ಮುಂಗಾರು ವಿಳಂಬದಿಂದ ಕೃಷಿ ಕಾರ್ಯ 15 ದಿನ ಕುಂಠಿತವಾಗಿರಬಹುದು. ಆದರೆ ಈಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಇದು ಸಿಹಿ ಸುದ್ದಿ. ಅವರು ಬಿತ್ತನೆ ಪ್ರಾರಂಭಿಸಬಹುದು" ಎಂದು ಹೇಳಿದ್ದಾರೆ.

ಒಡಿಶಾದ 13 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​: ಐಎಂಡಿ ಭಾನುವಾರ ಒಡಿಶಾದ 13 ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳ ಕಾಲ ಆರೆಂಜ್ ಅಲರ್ಟ್​ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯವು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವನ್ನು ಅನುಭವಿಸಲಿದೆ ಎಂದು ತಿಳಿಸಿದೆ. ಐಎಂಡಿ ಪ್ರಕಾರ ಒಡಿಶಾದಲ್ಲಿ 10 ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಮೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಹಿಮಾಚಲ ಪ್ರದೇಶದ ಭಾರಿ ಹಾನಿ:ಕಳೆದ 24 ಗಂಟೆಗಳಲ್ಲಿ ಸುರಿದ ನಿರಂತರ ಮಳೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ. ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಮಂಡಿ ಜಿಲ್ಲೆಯ ಜಂಜೆಹ್ಲಿ ಎಂಬಲ್ಲಿನ ಹಳ್ಳದಲ್ಲಿ ಹಠಾತ್ ಪ್ರವಾಹದಿಂದಾಗಿ ಹಲವಾರು ವಾಹನಗಳು ಕೊಚ್ಚಿಹೋಗಿವೆ. ನದಿಯ ಕೆಳಭಾಗದಲ್ಲಿರುವ ಅನೇಕ ಮನೆಗಳು ಅಪಾಯವನ್ನು ಎದುರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ ಮಂಡಿಯಲ್ಲಿ 64.4 ಮಿ.ಮೀ ಮಳೆಯಾಗಿದೆ. ಜಿಲ್ಲಾದ್ಯಂತ ಅನೇಕ ಸ್ಥಳಗಳಲ್ಲಿ ಭೂಕುಸಿತದ ಘಟನೆಗಳು ವರದಿಯಾಗಿವೆ. ರಾಜ್ಯದ ಇತರ ಭಾಗಗಳಲ್ಲಿಯೂ ಭಾರಿ ಮಳೆಯಿಂದಾಗಿ ಹಾನಿ ವರದಿಯಾಗಿದೆ. ಕುಲು ಜಿಲ್ಲೆಯಲ್ಲಿ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ಕುಲು ಪಟ್ಟಣದ ಬಳಿಯ ಮೊಹಲ್ ನದಿಯಲ್ಲಿ ಎಂಟು ವಾಹನಗಳು ಕೊಚ್ಚಿ ನೀರು ಪಾಲಾಗಿವೆ.

ಕೇದಾರನಾಥ ಯಾತ್ರೆ ರದ್ದು:ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಕೇದಾರನಾಥ ಯಾತ್ರೆಯನ್ನು ಸೋನ್‌ಪ್ರಯಾಗದಲ್ಲಿ ನಿಲ್ಲಿಸಲಾಗಿದೆ ಎಂದು ಭಾನುವಾರ ತಿಳಿಸಿದ್ದಾರೆ. "ಭಾರಿ ಮಳೆ ಸುರಿಯುತ್ತಿರುವುದರಿಂದ ಕೇದಾರನಾಥವನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ" ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದ್ದಾರೆ. ಭಾರಿ ಮಳೆಯ ನಡುವೆಯೇ ಕೇದಾರನಾಥ ಯಾತ್ರೆಯ ಅಡಿ ನಿಲ್ದಾಣಗಳಲ್ಲಿ ಪೊಲೀಸ್ ಪಡೆ, ಎಸ್‌ಡಿಆರ್‌ಎಫ್ ಮತ್ತು ಡಿಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ರುದ್ರಪ್ರಯಾಗ ಪೊಲೀಸರು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರುದ್ರಪ್ರಯಾಗ ಜಿಲ್ಲೆಯ ಕೆಳಭಾಗದಿಂದ ಶ್ರೀ ಕೇದಾರನಾಥ ಧಾಮದವರೆಗೆ ಭಾರಿ ಮಳೆಯಾಗುತ್ತಿದೆ. ಭಾರಿ ಮಳೆಯ ನಡುವೆ ಯಾತ್ರೆಯ ಪಾದಚಾರಿ ನಿಲ್ದಾಣಗಳಲ್ಲಿ ನಿಯೋಜಿಸಲಾದ ಪೊಲೀಸ್ ಪಡೆ, ಎಸ್‌ಡಿಆರ್‌ಎಫ್ ಮತ್ತು ಡಿಡಿಆರ್‌ಎಫ್ ತಂಡಗಳು ಯಾತ್ರಾರ್ಥಿಗಳಿಗೆ ರಸ್ತೆ ದಾಟಲು ಸಹಾಯ ಮಾಡುತ್ತಿವೆ ಎಂದು ಉತ್ತರಾಖಂಡದ ರುದ್ರಪ್ರಯಾಗ ಪೊಲೀಸರು ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರ ತಡರಾತ್ರಿಯಿಂದ ಸುರಿದ ಭಾರಿ ಮಳೆಗೆ ಹರಿದ್ವಾರ ನಗರದ ಕೆಲವು ಭಾಗಗಳು ಜಲಾವೃತಗೊಂಡಿವೆ. ನಗರದ ಜ್ವಾಲಾಪುರ, ಕಂಖಾಲ್, ರಾಣಿಪುರ ಮೌದ್, ರೋಶನಾಬಾದ್ ಮುಂತಾದ ಪ್ರದೇಶಗಳು ಹಾನಿಗೀಡಾಗಿವೆ.

"ಭಾನುವಾರ ಬೆಳಿಗ್ಗೆಯಿಂದ ಭಾರಿ ಮಳೆ ಮುಂದುವರೆದಿದೆ. ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಸ್ವಚ್ಛಗೊಳಿಸದ ಪರಿಣಾಮವಾಗಿ ಬೀದಿಗಳಲ್ಲಿ ನೀರು ನಿಂತಿದೆ. ಅಂಗಡಿಯ ಗಡಿ ಗೋಡೆ ಒಡೆದಿದೆ. ನಾವು ಹರಿದ್ವಾರ ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇವೆ. ಕೆಲವು ಜನರ ಮನೆಗಳು ನೀರಿನಿಂದ ಜಲಾವೃತವಾಗಿವೆ. ನಾವು ಅವರಿಗೆ ತಾತ್ಕಾಲಿಕ ಪರಿಹಾರವನ್ನು ನೀಡುತ್ತೇವೆ. ಜಿಲ್ಲಾ ವಿಪತ್ತು ನಿರ್ವಹಣಾ ತಂಡದಿಂದ ಹಾನಿಯನ್ನು ಅಂದಾಜು ಮಾಡಲಾಗುತ್ತಿದೆ"- ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಹರಿದ್ವಾರ್ ಪುರನ್ ಸಿಂಗ್ ರಾಣಾ.

ಇದನ್ನೂ ಓದಿ:Rain: ಮುಂಬೈ, ಹರಿಯಾಣ, ದೆಹಲಿ, ಛತ್ತೀಸ್‌ಗಢ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರಿ ವರ್ಷಧಾರೆ

ABOUT THE AUTHOR

...view details