ಜೈಪುರ (ರಾಜಸ್ಥಾನ): ಈ ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದೆ. ರಾಜ್ಯದ ಚುಕ್ಕಾಣಿ ಹಿಡಿಯಲು ರಾಷ್ಟ್ರೀಯ ಪಕ್ಷಗಳ ಜೊತೆ ಸ್ಥಳೀಯ ಪಕ್ಷಗಳೂ ಹವಣಿಸುತ್ತಿರುವ ನಡುವೆ ಕಾಂಗ್ರೆಸ್ ಸರ್ಕಾರ ಮತದಾರರಿಗೆ ಭರಪೂರ ಉಚಿತಗಳನ್ನು ಘೋಷಿಸುತ್ತಿದೆ. ಗುರುವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯ ಎಲ್ಲ ಮನೆಗಳಿಗೂ 100 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರಕಟಿಸಿದ್ದಾರೆ.
''ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಹೆಚ್ಚುವರಿಯಾಗಿ ಎಷ್ಟೇ ಬಳಕೆಯಾದರೂ ಮೊದಲ 100 ಯೂನಿಟ್‌ಗೆ ವಿದ್ಯುತ್ ಶುಲ್ಕ ಪಾವತಿಸಬೇಕಾಗಿಲ್ಲ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಚುನಾವಣಾ ವರ್ಷದ ಹಿನ್ನೆಲೆಯಲ್ಲಿ ಇದು ಗೆಹ್ಲೋಟ್ ಸರ್ಕಾರದ ದೊಡ್ಡ ನಿರ್ಧಾರ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಗೆಹ್ಲೋಟ್, "ಹಣದುಬ್ಬರ ಪರಿಹಾರದ ಬಗ್ಗೆ ಚರ್ಚೆ ನಡೆಸಿ, ಮೇ ತಿಂಗಳಿನಲ್ಲಿ ವಿದ್ಯುತ್ ಬಿಲ್‌ಗಳಲ್ಲಿ ಹೆಚ್ಚುವರಿ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸ್ವೀಕರಿಸಲಾಗಿತ್ತು. ಅದರ ಆಧಾರದ ಮೇಲೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತಿಂಗಳಿಗೆ 100 ಯೂನಿಟ್ ವರೆಗೆ ವಿದ್ಯುತ್ ಬಳಕೆ ಮಾಡುವವರ ವಿದ್ಯುತ್ ಬಿಲ್ ಶೂನ್ಯವಾಗಿರಲಿದೆ. ಅವರು ಮುಂಗಡವಾಗಿ ಯಾವುದೇ ಬಿಲ್ ಪಾವತಿಸಬೇಕಾಗಿಲ್ಲ. ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿಯೇ ನೀಡಲಾಗುವುದು. ವಿಶೇಷವಾಗಿ ಮಧ್ಯಮ ವರ್ಗದ ಜನರು, ತಿಂಗಳಿಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಗ್ರಾಹಕರು, ಮೊದಲ 100 ಯೂನಿಟ್ ವಿದ್ಯುತ್ ಉಚಿತ. ಇದರ ಜೊತೆಗೆ 200 ಯೂನಿಟ್‌ಗಳವರೆಗೆ ಸ್ಥಿರ ಶುಲ್ಕವಿರಲಿದೆ. ಇಂಧನ ಹೆಚ್ಚುವರಿ ಶುಲ್ಕ ಮತ್ತು ಇತರ ಎಲ್ಲ ಶುಲ್ಕಗಳನ್ನು ಸರ್ಕಾರ ಮನ್ನಾ ಮಾಡುತ್ತದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟರ್ ಖಾತೆಯಲ್ಲಿ, ಇಂದು ರಾತ್ರಿ (ಗುರುವಾರ) 10.45ಕ್ಕೆ ರಾಜ್ಯದ ಜನತೆಗೆ ದೊಡ್ಡ ಪರಿಹಾರ ಘೋಷಿಸುತ್ತೇನೆ ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅವುಗಳ ಪೈಕಿ 200 ಯೂನಿಟ್ ಉಚಿತ ವಿದ್ಯುತ್ ಕೂಡ ಒಂದಾಗಿತ್ತು. ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೇರಿದೆ. ರಾಜಸ್ಥಾನ ಸರ್ಕಾರದ ಉಚಿತ ವಿದ್ಯುತ್ ಘೋಷಣೆ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗೆಹ್ಲೋಟ್ ಸರ್ಕಾರ ಕಾರ್ನಾಟಕದ ಮಾದರಿಯನ್ನೇ ಅನುಸರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:ಅಹಮದ್ನಗರ ಇನ್ಮುಂದೆ ಅಹಲ್ಯಾನಗರ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಘೋಷಣೆ