ಭುವನೇಶ್ವರ್: ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ನಿನ್ನೆ ಸಂಚರಿಸುತ್ತಿದ್ದ ದುರ್ಗ್ - ಪುರಿ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೆಲಕಾಲ ಭಯಭೀತರಾದ ಘಟನೆ ಜರುಗಿತು ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಿನ್ನೆ ಸಂಜೆ ಖರಿಯಾರ್ ರಸ್ತೆ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ B3 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಘರ್ಷಣೆ ಮತ್ತು ಬ್ರೇಕ್‌ಗಳ ಅಪೂರ್ಣ ಬಿಡುಗಡೆಯಿಂದಾಗಿ ಬ್ರೇಕ್ ಪ್ಯಾಡ್‌ಗಳಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಯಾವುದೇ ಹಾನಿಯಾಗಿಲ್ಲ. ಒಂದು ಗಂಟೆಯೊಳಗೆ ಸಮಸ್ಯೆ ಸರಿಪಡಿಸಲಾಗಿದ್ದು, ಬಳಿಕ ರಾತ್ರಿ 11 ಗಂಟೆಗೆ ನಿಲ್ದಾಣದಿಂದ ರೈಲು ಹೊರಟಿತು ಎಂದು ಪೂರ್ವ ಕರಾವಳಿ ರೈಲ್ವೆ ಹೇಳಿದೆ.
ಇನ್ನು ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕೆಲ ಪ್ರಯಾಣಿಕರು ಆತಂಕಗೊಂಡು ರೈಲಿನಿಂದ ಇಳಿದು ಹೊರಬಂದ ದೃಶ್ಯ ಕಂಡು ಬಂದಿತು.
ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು : ಕಳೆದ ಎರಡು ದಿನಗಳ ಹಿಂದಷ್ಟೇ (ಜೂನ್ 7 ರಂದು) ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಿಟೋನಿ ರೈಲು ನಿಲ್ದಾಣದ ಬಳಿ ಎಲ್‌ಪಿಜಿ ತುಂಬಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದವು. ಗೂಡ್ಸ್ ರೈಲು ಮುಖ್ಯ ಗೇಟ್ ಬಳಿ ತಲುಪಿದ ಬಳಿಕ ಎರಡು ಬೋಗಿಗಳು ಹಳಿತಪ್ಪಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದರು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.