ವಾರಣಾಸಿ: ಶ್ರೀ ಕಾಶಿ ವಿಶ್ವನಾಥ ದೇಗುಲದ ಸ್ಪರ್ಶ ದರ್ಶನ (ಕಾಶಿ ವಿಶ್ವನಾಥ ದೇಗುಲದಲ್ಲಿ ಸ್ಪರ್ಶ ದರ್ಶನ ವದಂತಿ) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಬೆನ್ನಲ್ಲೇ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿ ಇದೀಗ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ, ಓರ್ವ ಅಪರಿಚಿತ ಸೇರಿದಂತೆ ಒಟ್ಟು 9 ಜನರ ವಿರುದ್ಧ ದೇವಾಲಯದ ಪಿಆರ್‌ಓ ಅರವಿಂದ್ ಶುಕ್ಲಾ ಎಫ್‌ಐಆರ್ ದಾಖಲಿಸಿದ್ದಾರೆ. ದೇವಾಲಯದ ಅನೇಕ ನೌಕರರು ಸಹ ಈ ಸಂಚಿನ ಭಾಗವಾಗಿರುವ ಶಂಕೆ ಇದ್ದು, ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಈ ವಿಚಾರದ ಕುರಿತು ಮಾತನಾಡಿದ ಎಸಿಪಿ ದಶಾಶ್ವಮೇಧ ಅವಧೇಶ್ ಕುಮಾರ್ ಪಾಂಡೆ, ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಸ್ಪರ್ಶ ದರ್ಶನಕ್ಕೆ ಶುಲ್ಕ ವಿಧಿಸಲಾಗುತ್ತಿದೆ ಎಂಬ ಸುದ್ದಿ ಸೋಮವಾರ ವೈರಲ್ ಆಗಿದೆ. ಇದೇ ವೇಳೆ ಈ ಪ್ರಕರಣದಲ್ಲಿ ದೇವಸ್ಥಾನದ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದ್ದಕ್ಕಾಗಿ ಹೆಸರು ಗೊತ್ತಿರುವ 8 ಜನ ಹಾಗೂ ಓರ್ವ ಅಪರಿಚಿತನ ವಿರುದ್ಧ ವಿವಿಧ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ದೇವಸ್ಥಾನದ ಆಡಳಿತ ಮಂಡಳಿಯ ಪಿಆರ್‌ಓ ಅರವಿಂದ್ ಶುಕ್ಲಾ ದೂರಿನ ಮೇರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 2 ರಂದು ರಂಗಭಾರಿ ಏಕಾದಶಿಯ ದಿನದ ಮೊದಲು, ದೇವಸ್ಥಾನದ ಟಿಕೆಟ್ ಕೌಂಟರ್‌ನಿಂದ ಅಜಯ್ ಶರ್ಮಾ ಎಂಬ ವ್ಯಕ್ತಿಯು ಪೂಜೆಗಾಗಿ 500 ರೂ.ಗಳ ದೇಣಿಗೆ ರಸೀದಿ ಪಡೆದಿದ್ದ. ದೇವಸ್ಥಾನದ ಸಿಬ್ಬಂದಿಯ ಸಹಾಯದಿಂದ ಇದೇ ರಸೀದಿಯ ಮೇಲೆ ಸ್ಪರ್ಶ ದರ್ಶನ ಎಂದು ಬರೆಸಿಕೊಳ್ಳಲಾಗಿತ್ತು. ಇದರ ಪ್ರಕಾರ ಸ್ಪರ್ಶ ದರ್ಶನ ಎಂದು ಬರೆದಿರುವುದರ ಹಿಂದೆ ಅಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯ ತಪ್ಪು ಕಂಡು ಬರುತ್ತದೆ. ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹೀಗೆ ನೀಡಿದ ದುಡ್ಡಿಗೆ ತಪ್ಪು ಸೇವೆಯ ರಸೀದಿ ಪಡೆದು ಅಜಯ್ ಶರ್ಮಾ ಎಂಬಾತ ಈ ರಸೀದಿಯನ್ನು ತನ್ನ ಸಾಮಾಜಿಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಸುದ್ದಿ ಚಾನೆಲ್‌ಗಳ ಮೂಲಕ ತಪ್ಪು ತಿಳುವಳಿಕೆ ಮೂಡುವಂತೆ ಪ್ರಸಾರ ಮಾಡಿದ್ದಾರೆ. ಇಷ್ಟೇ ಅಲ್ಲದೆ ದೇವಸ್ಥಾನದ ಕೆಲ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಿದ್ದಾನೆ.