ಸಹರ್ಸಾ (ಬಿಹಾರ): ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದು ತನ್ನ ನಿವಾಸದ ಬಳಿಯ ಗುಂಡಿಯಲ್ಲಿ ಹೂತಿಟ್ಟಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಭಾನುವಾರ ರಾತ್ರಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿಯ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದರು. ಇದರಿಂದ ಆಕ್ರೋಶಗೊಂಡಿದ್ದ ದುರುಳ ತನ್ನ ನಾಲ್ಕು ವರ್ಷದ ಮಗಳನ್ನು ಕೊಂದು ಮೊದಲಿಗೆ ನದಿಯಲ್ಲಿ ಎಸೆದಿದ್ದ.
ಮೃತ ಮಗು ಬಸ್ನಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧೇಪುರ ಗ್ರಾಮದ ನಿವಾಸಿಯಾಗಿದೆ. ಆರೋಪಿಯನ್ನು ರಾಜ್‌ಕುಮಾರ್ ಸಾಹ್ನಿ ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿ ರಾಜ್‌ಕುಮಾರ್ ಭಾನುವಾರ ರಾತ್ರಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅದೇ ಕೋಪದ ಭರದಲ್ಲಿ ತನ್ನ ಹೆಂಡತಿಯನ್ನು ಹೊಡೆದಿದ್ದಾನೆ. ಜಗಳ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಆಕೆ ನೆರೆಯ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಭಾನುವಾರ ಬೆಳಗ್ಗೆ ಆಕೆ ತಾಯಿಯ ಮನೆಗೆ ಹೋಗಿದ್ದಾಳೆ. ಇದೇ ಸಮಯದಲ್ಲಿ ರಾಜ್‌ಕುಮಾರ್ 4 ವರ್ಷದ ಮಗುವನ್ನು ಹತ್ಯೆ ಮಾಡಿದ್ದಾನೆ . ನಂತರ ಮೃತದೇಹವನ್ನು ಹತ್ತಿರದ ನದಿಗೆ ಎಸೆದಿದ್ದಾನೆ. ನಂತರ ಮತ್ತೆ ನದಿಗೆ ಹೋಗಿ ಮಗುವಿನ ಶವವನ್ನು ಮರಳಿ ತಂದಿದ್ದಾನೆ. ಗುಂಡಿ ತೋಡಿ ಶವ ಹೂತು ಏನೂ ಆಗಿಲ್ಲ ಎಂಬಂತೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಕುಮಾರ್ನ ಕುಕೃತ್ಯದ ಬಗ್ಗೆ ಸಂಶಯ ಪಟ್ಟ ನೆರೆಹೊರೆಯವರು ಆತನ ಪತ್ನಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಆರೋಪಿ ಪತ್ನಿಯು ತನ್ನ ತಾಯಿಯೊಂದಿಗೆ ಗಂಡನ ಮನೆಗೆ ಬಂದು ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಮಗುವಿನ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿಯು ತನ್ನನ್ನು ತೊರೆದು ಹೋದ ಕಾರಣಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮಗುವನ್ನು ಕೊಂದಿರುವುದಾಗಿ ಆರೋಪಿಯು ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಠಾಣೆ ಪ್ರಭಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ, ವರದಕ್ಷಿಣೆ ಕಿರುಕುಳ ಶಂಕೆ: ಉತ್ತರ ಪ್ರದೇಶದ ಮುಜಾಫರ್‌ನಗರದ ಕಮ್ಹೆಡಾ ಗ್ರಾಮದಲ್ಲಿ 24 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಮಹಿಳೆಯ ತವರು ಮನೆಯವರು ಆರೋಪಿಸಿದ್ದರೆ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳಿದ್ದಾರೆ.
ಭಾನುವಾರ ರಾತ್ರಿ ರೂಪಾ ತನ್ನ ಮನೆಯಲ್ಲಿ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸರ್ಕಲ್ ಆಫೀಸರ್ ರಾಮಶಿಶ್ ಯಾದವ್ ತಿಳಿಸಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ರೂಪಾಳ ತಂದೆ ಓಂಪಾಲ್ ಸಿಂಗ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತನ್ನ ಮಗಳನ್ನು ಆಕೆಯ ಅತ್ತೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 18 ವರ್ಷ ತುಂಬದೇ ನಡೆಯುವ ವಿವಾಹವನ್ನು ಅನೂರ್ಜಿತಗೊಳಿಸಲಾಗದು: ಹೈಕೋರ್ಟ್