ನವದೆಹಲಿ:ಚಿಲ್ಲಾ ಗಡಿಯಲ್ಲಿ ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ಬುಧವಾರದಿಂದ ಮುಷ್ಕರವನ್ನು ಹಿಂತೆಗೆದುಕೊಂಡಿದೆ.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ನಂತರ ರೈತರ ಚಳವಳಿ ದುರ್ಬಲಗೊಂಡಿದೆ. ಅಲ್ಲದೇ ಮಂಗಳವಾರ ನಡೆದ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಹಿಂಸಾತ್ಮಕ ಘಟನೆಗಳು ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನವಾದ ಕಾರಣ ಭಾನು ಬಣ ಮುಷ್ಕರವನ್ನು ಹಿಂತೆಗೆದುಕೊಂಡಿದೆ.
ಭಾರತೀಯ ಕಿಸಾನ್ ಯೂನಿಯನ್ (ಭಾನು) ರಾಷ್ಟ್ರೀಯ ಅಧ್ಯಕ್ಷ ಠಾಕೂರ್ ಭಾನು ಪ್ರತಾಪ್ ಸಿಂಗ್ ಚಿಲ್ಲಾ ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಿಂಸಾತ್ಮಕ ದಾಳಿ ನಡೆಸಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಒಂದು ನಿರ್ದಿಷ್ಟ ಧರ್ಮದ ಧ್ವಜವನ್ನು ಕೆಂಪು ಕೋಟೆಯಲ್ಲಿ ಹಾರಿಸಿದ ರೀತಿ ಕೂಡ ದುಃಖಕರವಾದ ಸಂಗತಿ ಎಂದು ಹೇಳಿದರು.