ನವದೆಹಲಿ: ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಅನೇಕ ರೈತ ಸಂಘಟನೆಗಳ ಮುಖಂಡರು ಭಾಗಿಯಾಗಿ, ಅವರಿಗೆ ನೀಡಲಾಗಿದ್ದ ಷರತ್ತು ಮುರಿದು ಹಾಕಿದ್ದಾರೆ ಎಂದು ಪೊಲೀಸ್ ಆಯುಕ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಕೊಟ್ಟ ಮಾತಿಗೆ ತಪ್ಪಿದ ರೈತರು: ದೆಹಲಿ ಪೊಲೀಸ್ ಆಯುಕ್ತ ಕೃಷಿ ಕಾಯ್ದೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ನಿನ್ನೆ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತ ಎನ್.ಎಸ್.ಶ್ರೀವಾಸ್ತವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಓದಿ: 'ಹಿಂಸಾಚಾರ ಸಂಬಂಧ ಇಲ್ಲಿಯವರೆಗೆ 25 ಕೇಸು ದಾಖಲಿಸಿದ್ದೇವೆ; ಯಾವುದೇ ಆರೋಪಿಯನ್ನು ಬಿಡಲ್ಲ'
ರೈತರು ಪ್ರತಿಭಟನೆ ನಡೆಸಲು ನೀಡಲಾಗಿದ್ದ ಷರತ್ತಿನಂತೆ ನಡೆದುಕೊಳ್ಳಲಿಲ್ಲ. ಹಿಂಸಾಚಾರ ನಡೆಸುವ ಬಗ್ಗೆ ನಮಗೆ ಜನವರಿ 25ರ ಸಂಜೆ ಮಾಹಿತಿ ಗೊತ್ತಾಗಿತ್ತು. ಕೆಲ ಸಮಾಜಘಾತುಕ ಶಕ್ತಿಗಳು ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿವೆ ಎಂದರು.
ಟ್ರ್ಯಾಕ್ಟರ್ ರ‍್ಯಾಲಿ ಶಾಂತಿಯುತವಾಗಿ ನಡೆಸುವಂತೆ ಸೂಚನೆ ನೀಡಲಾಗಿತ್ತು. ಅದಕ್ಕೆ ರೈತ ಸಂಘಟನೆಗಳು ಒಪ್ಪಿಗೆ ನೀಡಿದ್ದವು. ಆದರೆ ನಾವು ನೀಡಿದ್ದ ಷರತ್ತು ಬ್ರೇಕ್ ಮಾಡಿ ಹಿಂಸೆಯಲ್ಲಿ ಭಾಗಿಯಾಗಿವೆ ಎಂದು ಹೇಳಿದರು. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು, ರೈತರು ಕೊಟ್ಟ ಮಾತು ಮುರಿದಿದ್ದಾರೆ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮಹತ್ವದ ಮಾಹಿತಿ ಕಲೆಹಾಕಲಾಗುತ್ತಿದ್ದು, ಹಲವರ ಹೆಸರುಗಳು ಬಹಿರಂಗಗೊಳ್ಳಲಿವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.