ಸಂಗ್ರೂರ್(ಪಂಜಾಬ್):ಬೆವರು ಸುರಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮನೆ ನಿರ್ಮಾಣ ಮಾಡಿದ್ದ ಜಾಗದಲ್ಲಿ ಹೆದ್ದಾರಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದರಿಂದ ಮಂಡ್ಯದ ವ್ಯಕ್ತಿಯೋರ್ವ ಬರೋಬ್ಬರಿ 20 ಲಕ್ಷ ಖರ್ಚು ಮಾಡಿ, 65 ಅಡಿಗಳಷ್ಟು ದೂರಕ್ಕೆ ಮನೆ ಸ್ಥಳಾಂತರ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಪಂಜಾಬ್ನ ಸಂಗ್ರೂರ್ನ ರೈತನೋರ್ವ ಎರಡು ಅಂತಸ್ತಿನ ಮನೆಯನ್ನು 500 ಅಡಿಗಳಷ್ಟು ದೂರಕ್ಕೆ ಸ್ಥಳಾಂತರ ಮಾಡ್ತಿದ್ದಾರೆ.
ಪಂಜಾಬ್ನ ಸಂಗ್ರೂರ್ನಲ್ಲಿ ರೈತ 1.5 ಕೋಟಿ ರೂಪಾಯಿ ಖರ್ಚು ಮಾಡಿ, ಎರಡು ಅಂತಸ್ತಿನ ಸುಂದರವಾದ ಮನೆ ನಿರ್ಮಿಸಿದ್ದಾರೆ. ಈ ಜಾಗದಲ್ಲಿ ಇದೀಗ ದೆಹಲಿ-ಅಮೃತಸರ್-ಕತ್ರಾ ಎಕ್ಸ್ಪ್ರೆಸ್ ವೇ ಮಾರ್ಗ ಹಾದು ಹೋಗಲಿದೆ. ಹೀಗಾಗಿ, ಸರ್ಕಾರ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಜೊತೆಗೆ ಅವರಿಗೆ ಪರಿಹಾರದ ಮೊತ್ತವನ್ನು ನೀಡಿದೆ. ಆದರೆ, ಕಷ್ಟಪಟ್ಟು ಕಟ್ಟಿರುವ ಮನೆ ಬಿಟ್ಟು ಹೋಗಲು ಇಷ್ಟವಿಲ್ಲದ ಕಾರಣ ಸುಖ್ವಿಂದರ್ ಸಿಂಗ್ ಇದೀಗ 50 ಲಕ್ಷ ರೂಪಾಯಿ ಖರ್ಚು ಮಾಡಿ, 500 ಅಡಿಗಳಷ್ಟು ದೂರಕ್ಕೆ ಮನೆಯನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈಗಾಗಲೇ 250 ಅಡಿಗಳಷ್ಟು ಮನೆ ಸ್ಥಳಾಂತರಗೊಂಡಿದೆ.
ಕಷ್ಟಪಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿದ್ದರಿಂದ ಸುಲಭವಾಗಿ ಕೆಡವಲು ಮನಸು ಬರುತ್ತಿಲ್ಲ. ಹೀಗಾಗಿ, ಪಂಜಾಬ್ ರೈತ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡಲಾಗಿದೆ. ಬಿಟ್ಟು ಹೋಗಲು ಮನಸು ಒಪ್ಪುತ್ತಿಲ್ಲ. ಹೀಗಾಗಿ, ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.