ಮುಂಬೈ(ಮಹಾರಾಷ್ಟ್ರ):ಸುಪ್ರೀಂಕೋರ್ಟ್ ಮಹಾರಾಷ್ಟ್ರದ ಅಘಾಡಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಮಾಡಲು ಆದೇಶ ನೀಡುತ್ತಿದ್ದಂತೆ ನಿನ್ನೆ ರಾತ್ರಿ ಫೇಸ್ಬುಕ್ ಲೈವ್‌ಗೆ ಬಂದ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು. ಇದೀಗ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಬಿಜೆಪಿ ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿದೆ. ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಸಿಎಂ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ.
ರಾಜ್ಯದಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೆ ಶಿವಸೇನೆಯ ಬಂಡಾಯ ಶಾಸಕರು ಸಾಥ್ ನೀಡಿದ್ದಾರೆ. ಉದ್ಧವ್ ವಿರುದ್ಧ ಬಂಡೆದ್ದ ಶಾಸಕರು ಈಗಾಗಲೇ ಗೋವಾದ ಪಣಜಿಯಲ್ಲಿದ್ದು, ಮುಖ್ಯಸ್ಥ ಏಕನಾಥ್ ಶಿಂಧೆ ಮುಂಬೈಗೆ ಆಗಮಿಸಿದ್ದಾರೆ.
ಏಕನಾಥ್ ಶಿಂಧೆ ಇಂದು ಮಧ್ಯಾಹ್ನ ರಾಜ್ಯಪಾಲರು ಹಾಗೂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲಿದ್ದಾರೆ. ಹಾಗಾಗಿ, ಸರ್ಕಾರ ರಚನೆ ಕಸರತ್ತು ಮತ್ತಷ್ಟು ವೇಗ ಪಡೆದುಕೊಂಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಳೆ ರಾಜಭವನದಲ್ಲಿ ಫಡ್ನವೀಸ್ ಸಿಎಂ ಆಗಿಯೂ, ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ: ಬಿಜೆಪಿಯ 105 ಶಾಸಕರು, ಬಂಡಾಯ ಶಿವಸೇನೆಯ 39 ಶಾಸಕರು, ಸ್ವತಂತ್ರ 13 ಶಾಸಕರು ಹಾಗೂ ಸಣ್ಣ ಪಕ್ಷಗಳ 10 ಮಂದಿ ಶಾಸಕರಿದ್ದಾರೆ.